ಹುಬ್ಬಳ್ಳಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ಯಧರ್ಮದ ಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎನ್ನುವ ಬಗ್ಗೆ ದೂರುಗಳು ಬಂದಲ್ಲಿ ಧರ್ಮಸ್ಥಳದ ಮಾದರಿಯಲ್ಲೇ ಕಾರ್ಯಾಚರಣೆ ನಡೆಸುವ ತಾಕತ್ತು ಇದೆಯೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ. SIT ಹೆಸರಿನಲ್ಲಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮತ್ತು ನಂಬಿಕೆಗಳ ಮೇಲೆ ಆಘಾತವನ್ನು ಉಂಟು ಮಾಡುವ ಕೆಲಸ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರುದಾರ ಮುಸುಕುಧಾರಿ ದಿನಕ್ಕೊಂದರ ಹಾಗೆ ಶವ ಹೂಳಲಾಗಿದೆ ಎನ್ನುವ ಸ್ಥಳಗಳನ್ನು ತೋರಿಸುತ್ತಿದ್ದಾನೆ. ಮೊದಲು 13 ಸ್ಥಳಗಳನ್ನು ತೋರಿಸಿದ್ದ. ಈಗ 19 ಸ್ಥಳಗಳನ್ನು ಗುರುತು ಮಾಡಿದ್ದಾನೆ. ಸಾಕ್ಷಿದಾರ ಅನಾಮಿಕ ರಾತ್ರಿ ಎಲ್ಲೆಲ್ಲಿಯೋ ಇರುತ್ತಾನೆ. ಹಗಲು ಬಂದು ಒಂದೊಂದು ಸ್ಥಳಗಳನ್ನು ತೋರಿಸುತ್ತಾನೆ. ಇದಕ್ಕೆ ಸರಕಾರ ಸಹ ಸೊಪ್ಪು ಹಾಕಿದೆ. ದೂರುದಾರ SIT ವಶದಲ್ಲೇಕೆ ಇಲ್ಲ? ಈ ಪ್ರಕರಣದಲ್ಲಿ ಸರ್ಕಾರ ಏನು ಮಾಡಲು ಹೊರಟಿದೆ ಎಂದು ಕೇಳಿದ್ದಾರೆ.