ಬೆಂಗಳೂರು: ರಾಹುಲ್ ಗಾಂಧಿ ಅವರ ಮತಗಳ್ಳತನ ಪ್ರಕರಣದಲ್ಲಿ ರಾಜ್ಯ ಸರಕಾರದ ಮೊದಲ ವಿಕೆಟ್ ಪತನಗೊಂಡಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಧಿವೇಶನದ ಮೊದಲ ದಿನವೇ ರಾಜೀನಾಮೇ ಸಲ್ಲಿಸಿದ್ದಾರೆ.
ಮತಗಳ್ಳತನ ಪ್ರಕರಣದಲ್ಲಿ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ (KN Rajanna Resigns) ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡಿದ ಸಂಬಂಧ ಕೆಎನ್ ರಾಜಣ್ಣ ನೀಡಿದ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಹೀಗಾಗಿ ರಾಜಣ್ಣ ಹೇಳಿಕೆಯ ವಿಡಿಯೋ ತರಿಸಿಕೊಂಡಿದ್ದ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಕೆಸಿ ವೇಣುಗೋಪಾಲ್ ಮತ್ತು ರಣ್ದೀಪ್ ಸಿಂಗ್ ಸುರ್ಜೇವಾಲ ರಾಹುಲ್ ಗಮನಕ್ಕೆ ತಂದಿದ್ದರು. ಇದನ್ನು ಗಮನಿಸಿದ ರಾಹುಲ್ ಗಾಂಧಿ ಕೆಎನ್ ರಾಜಣ್ಣ ವಿರುದ್ಧ ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಹೈಕಮಾಂಡ್ ವರಿಷ್ಠರ ಸೂಚನೆಯಿಂದ ಈಗ ತಮ್ಮ ಆಪ್ತನ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದು, ಹೀಗಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ಸ್ವತಃ ಕಾಂಗ್ರೆಸ್ ಪಕ್ಷವೇ ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದಂತಹ ಗಂಭೀರ ಆರೋಪ ಮಾಡಿರುವ ಸಮಯದಲ್ಲಿ ಕರ್ನಾಟಕದ ಸಚಿವರೊಬ್ಬರು ನೀಡಿರುವಂತಹ ಹೇಳಿಕೆ ಪಕ್ಷಕ್ಕೆ ದೊಡ್ಡ ಮಟ್ಟದ ಡ್ಯಾಮೇಜ್ ತಂದ ಹಿನ್ನೆಲೆಯಲ್ಲಿ ಸ್ವತಃ ರಾಹುಲ್ ಗಾಂಧಿ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.