ಚಾಮರಾಜನಗರ : ಬಂಡೀಪುರದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನನ್ನು ಕಾಡಾನೆಯೊಂದು ಅಟ್ಟಾಡಿಸಿ ತುಳಿದಿರುವ ಘಟನೆ ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ನಡೆದಿದೆ. ಪ್ರಸ್ತುತ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳದ ಪ್ರವಾಸಿಗನೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾಡಾನೆ ಮುಂದೆ ಹೋಗಿದ್ದು, ಈ ವೇಳೆ ಕಾಡಾನೆ ದಾಳಿ ನಡೆಸಿದೆ. ಆನೆ ಆತನನ್ನು ನೆಲಕ್ಕೆ ತಳ್ಳಿದ ಪರಿಣಾಮ ಆತ ಆನೆಯ ಕಾಲಿನ ಕೆಳಗೆ ಸಿಲುಕಿಕೊಂಡಿದ್ದಾನೆ. ಆದರೆ ಆನೆ ನಿಧಾನವಾಗಿ ಆತನ ಮೇಲೆ ಕಾಲು ಇರಿಸಿದ್ದರಿಂದ ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ವೈರಲ್ ಆದ ವಿಡಿಯೋದಲ್ಲಿ ಬಂಡೀಪುರ – ಕೆಕ್ಕನಹಳ್ಳ ಚೆಕ್‌ಪೋಸ್ಟ್ ನಡುವಿನ ಕಾಡಿನ ರಸ್ತೆಯಲ್ಲಿ ಪ್ರಯಾಣಿಕನೊಬ್ಬ ಕಾಡಾನೆ ಜತೆ ಸೆಲ್ಫಿ ಕ್ಲಿಕ್ ಮಾಡಿಕೊಳ್ಳಲು ವಾಹನದಿಂದ ಇಳಿದಿದ್ದಾನೆ. ಈ ವೇಳೆ, ರೊಚ್ಚಿಗೆದ್ದ ಕಾಡಾನೆ ಆತನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಓಡುತ್ತಿದ್ದಾಗ ಎಡವಿ ಬಿದ್ದ ಪ್ರಯಾಣಿಕನನ್ನು ಕಾಡಾನೆ ತುಳಿದಿದೆ.