ಚಿತ್ರದುರ್ಗ: ರಾಜ್ಯ ನಿವೃತ್ತಿ ನೌಕರರಿಗೆ ಸಂಧ್ಯಾ ಕಿರಣ ಯೋಜನೆ ಜಾರಿ ಮಾಡಬೇಕು ಇಲ್ಲವಾದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಅಧ್ಯಕ್ಷ ಡಾ.ಎಲ್.ಬೈರಪ್ಪ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಚಿತ್ರದುರ್ಗದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವು ಸ್ಥಾಪನೆಗೊಂಡು ಸುಮರು 65ವರ್ಷಗಳು ಕಳೆದಿವೆ. ನಿವೃತ್ತ ನೌಕರರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ. ರಾಜ್ಯದಲ್ಲಿ ಸುಮಾರು 4 ಲಕ್ಷ 20ಸಾವಿರ ನಿವೃತ್ತಿ ನೌಕರರು 1 ಲಕ್ಷ ಕುಟುಂಬ ಪಿಂಚಣಿದಾರರಿದ್ದಾರೆ. ಇವರಿಗೆ ಪ್ರಮುಖವಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಆದ್ಯ ಕರ್ತವ್ಯ. ಇದರ ಹಿನ್ನೆಲೆಯಲ್ಲಿ “ನಗದು ರಹಿತ ಆರೋಗ್ಯ ಭಾಗ್ಯ ಅಂದರೆ, “ಸಂಧ್ಯಾ ಕಿರಣ” ಯೋಜನೆಯನ್ನು ಅನುಷ್ಟಾನಗೊಳಿಸಬೇಕೆಂದು ಸರ್ಕಾರದ ಜೊತೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಆದರೆ ಇದುವರೆವಿಗೂ ಸರ್ಕಾರ ಅನುಷ್ಟಾನ ಮಾಡಿರುವುದಿಲ್ಲ ಆದುದರಿಂದ ಸರ್ಕಾರವು ಕೂಡಲೇ ಜಾರಿಗೊಳಿಸಬೇಕೆಂದು ಸಂಘವು ಅಗ್ರಹ ಪಡಿಸುತ್ತದೆ.
ಸರ್ಕಾರಿ ಕೆಲಸದ ವೇಳೆ ಅನುಭವಿಸಿದಂತಹ ಒತ್ತಡದಿಂದಾಗಿ ನೌಕರರು ನಿವೃತ್ತಿಯ ಬಳಿಕಾ ಸಾಕಷ್ಟು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ. ಇದು ಸೇರಿದಂತೆ ನಮ್ಮ ಇತರೆ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದರೆ ಗ್ಯಾರೆಂಟಿ ಯೋಜನೆಗೆ 56 ಲಕ್ಷ ಕೋಟಿ ರೂ. ಖರ್ಚು ಆಗುತ್ತಿದೆ. ಇವುಗಳಿಗೆ ಹಣ ಸಾಕಾಗುತ್ತಿಲ್ಲ ಬೇರೆ ಯೋಜನೆಗಳಿಗೆ ಹಣ ಎಲ್ಲಿಂದ ತರಲಿ ಎಂದು ಸಬೂಬು ಹೇಳುತ್ತಾ ನುಣುಚಿ ಕೊಳ್ಳುತ್ತಿದ್ದಾರೆ. ಕೆಲಸದ ವೇಳೆ ಯಾವುದೇ ಸಬೂಬುಗಳನ್ನು ಹೇಳದೆ ನಾವುಗಳು ಕೆಲಸ ಮಾಡಿದ್ದೆವೆ. ನಮಗೆ ಈ ರೀತಿ ಸಬೂಬುಗಳು ಹೇಳುವುದು ಏಕೆ ? ಎಂದು ಪ್ರಶ್ನಿಸಿರುವ ಅವರು ನಮ್ಮ ಬೇಡಿಕೆಗಳನ್ನು ಸರ್ಕಾರ ಶೀಘ್ರವೇ ಈಡೇರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
7ನೇ ವೇತನ ಆಯೋಗವು ತನ್ನ ವರದಿಯಲ್ಲಿ ಸರ್ಕಾರಿ ನಿವೃತ್ತಿ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ 70 ವರ್ಷದ ಮೇಲ್ಪಟ್ಟು 80 ವರ್ಷದೊಳಗಿನ ವಯೋಮೀತಿ ಮೀರಿದವರಿಗೆ ಶೇ.10%ರಷ್ಟು ಮೂಲ ಪಿಂಚಣಿಯಲ್ಲಿ ಆರ್ಥಿಕ ಸೌಲಭ್ಯವನ್ನು ನೀಡಬೇಕೆಂದು ತನ್ನ ಸರ್ಕಾರವು ಕೂಡಲೇ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತದೆ. ಅನುಷ್ಟಾನಗೊಳಿಸಬೇಕೆಂದು ಒತ್ತಾಯಿಸಲಾಗಿದ್ದು ರಾಜ್ಯ ಸರ್ಕಾರಿ ನಿವೃತ್ತಿ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ನಿಧನ ಹೊಂದಿದ ಸಂಧರ್ಭದಲ್ಲಿ ಅಂತಹ ಪ್ರಕರಣಗಳಿಗೆ ಅಂತಿಮ ವಿಧಿ ವಿಧಾನಗಳ ವೆಚ್ಚಗಳನ್ನು ನಿರ್ವಹಿಸುವುದಕ್ಕಾಗಿ ಈಗಾಗಲೇ ಸರ್ಕಾರಿ ನೌಕರರಿಗೆ ಸುಮಾರು ವರ್ಷಗಳಿಂದ ರೂ.25,000/-ಗಳನ್ನು ನೀಡುತ್ತದೆ. ಅದೇ ಮಾದರಿಯಲ್ಲಿ 7ನೇ ವೇತನ ಆಯೋಗವು ತನ್ನ ವರದಿಯಲ್ಲಿ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ನಿಧನ ಹೊಂದಿದ ಸಂಧರ್ಭದಲ್ಲಿ ರೂ.10,000/ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಲಾಯಿತು.
ರಾಜ್ಯದಲ್ಲಿ 4.20 ಲಕ್ಷ ನಿವೃತ್ತಿ ನೌಕರರು ಒಂದು ಲಕ್ಷ ಕುಟುಂಬ ಪಿಂಚಿಣಿದಾರರಿದ್ದಾರೆ. ಇವರೆಲ್ಲರಿಗೂ ಸರ್ಕಾರಿ ನೌಕರರಂತೆ ಆರೋಗ್ಯ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದ್ದು, ಸರ್ಕಾರಕ್ಕೆ ನಮ್ಮಗಳ ಹಕ್ಕೋತ್ತಾಯ ಹೇಳಲು ಇದೇ ಆಗಸ್ಟ್ 29 ರಂದು ಚಿತ್ರದುರ್ಗದ ಶ್ರೀ ವಿನಾಯಕ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ವಿಭಾಗ ಮಟ್ಟದ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘದ ಖಜಾಂಚಿ ಆನಂದಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ, ನಂಜಪ್ಪ, ಗುರುಲಿಂಗಸ್ವಾಮಿ, ಜಿಲ್ಲಾಧ್ಯಕ್ಷ ಪ್ರೇಮನಾಥ್, ರಂಗಪ್ಪರೆಡ್ಡಿ, ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.