ಬೆಂಗಳೂರು: ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿ ಹಿಂದುಗಳ ಪುಣ್ಯಕ್ಷೇತ್ರವಾಗಿರುವ ಧರ್ಮಸ್ಥಳದ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಅಪಪ್ರಚಾರ ಹಾಗೂ ತೇಜೋವಧೆಯ ವಿರುದ್ಧ ಬಿಜೆಪಿ ಅಖಾಡಕ್ಕಿಳಿದಿದೆ. ತಲೆಬುರುಡೆ ಶೋಧಕ್ಕಾಗಿ ಧರ್ಮಸ್ಥಳದಲ್ಲಿ ಕಳೆದ ಸುಮಾರು 14 ದಿನಗಳಿಂದ ನಡೆಯುತ್ತಿರುವ ಅಗೆತ ಕಾರ್ಯಾಚರಣೆ ಹಾಗೂ ಇದರ ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗಳಿಂದ ಧರ್ಮಸ್ಥಳದ ಪಾವಿತ್ರ್ಯಕ್ಕೆ ಅಪಚಾರವಾಗುತ್ತಿದೆ ಎಂದು ಬಿಜೆಪಿ ಶಾಸಕರು ಸದನದಲ್ಲೂ ಮಾತನಾಡಿದ್ದಾರೆ. ಇದರ ಬೆನ್ನಿಗೆ ಬಿಜೆಪಿ ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲು ತೀರ್ಮಾನಿಸಿದೆ.
ಆ.17ರಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಶಾಸಕರು ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಸ್ಥಳ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕ್ಷೇತ್ರಕ್ಕೆ ಕಮ್ಯುನಿಷ್ಟರ ಮಧ್ಯ ಪ್ರವೇಶ ಆಗಿದೆ. ಎಸ್‌ಐಟಿ ತನಿಖೆ ಹಾದಿ ತಪ್ಪುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಯೂಟ್ಯೂಬ್, ವೆಬ್‌ಸೈಟ್‌ಗಳಲ್ಲಿ ಧರ್ಮಸ್ಥಳ ದೇಗುಲದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದುಗಳ ಶ್ರದ್ಧಾಕೇಂದ್ರದ ಬಗ್ಗೆ ಕ್ರಮ ಕೈಗೊಳ್ಳಿ. ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಬೇಕು. ಈ ಹುನ್ನಾರದ ಹಿಂದೆ ಎಸ್‌ಡಿಪಿಐ, ಪಿಎಫ್‌ಐ ಕೂಡ ಇದೆ ಎಂದು ಪ್ರಧಾನಿ ಮೋದಿಗೆ ಬೆಂಗಳೂರಿನ ನಿವಾಸಿ ವಸಂತ ಬಂಗೇರ ಎಂಬವರು ಪತ್ರ ಬರೆದಿದ್ದಾರೆ.
ಮಂತ್ರಾಲಯ ಶ್ರೀಗಳು ಮಾತನಾಡಿ, ಸನಾತನ ಧರ್ಮದ ಮೇಲೆ ಪರದೇಶವರು ದೌರ್ಜನ್ಯ ಎಸಗುತ್ತಿದ್ದಾರೆ. ಅಂತಹ ದುಷ್ಟಶಕ್ತಿಗಳನ್ನು ದಮನಗೊಳಿಸಬೇಕು. ರಾಯರ ಬೃಂದಾವನದಲ್ಲಿ ಮೂಳೆಗಳಿವೆ, ಬುರುಡೆಗಳಿವೆ ಎಂದು ಬುರುಡೆ ಬಿಡುತ್ತಿದ್ದಾರೆ ಎಂದಿದ್ದಾರೆ. ಶಿರಸಿಯ ಸೋಂದಾ ಜನಮಠದ ಜಗದ್ಗುರು ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ಧ್ವನಿ ಎತ್ತಿದ್ದಾರೆ.
ಈ ಮಧ್ಯೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆಗುತ್ತಿದೆ ಎಂದು ಹಾಸನ, ಚಿತ್ರದುರ್ಗ, ಬೀದರ್‌ನಲ್ಲಿ ಹಿಂದೂಪರ ಸಂಘಟನೆಗಳು, ಭಕ್ತರು ಪ್ರತಿಭಟನೆ ನಡೆಸಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.