ಬೆಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣ ಖಾಲಿ ಡಬ್ಬ ಅದರಲ್ಲಿ ಏನೂ ಇಲ್ಲ. ಅಲ್ಲಿ ಕೇವಲ ಸದ್ದು ಜಾಸ್ತಿ ಆಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿರುವುದು ಸಂಚಲನ ಉಂಟುಮಾಡಿದೆ. ನಿನ್ನೆ ಸದನದಲ್ಲಿ ಧರ್ಮಸ್ಥಳ ವಿಚಾರವಾಗಿ ತೀವ್ರ ಚರ್ಚೆ ನಡೆದಿದ್ದು, ಈ ಸಂದರ್ಭದಲ್ಲಿ ಡಿಕೆಶಿ, ಸೋಮವಾರ ಗೃಹ ಮಂತ್ರಿಗಳು ಎಲ್ಲ ವಿವರಗಳನ್ನು ತರಿಸಿಕೊಂಡು ಏನು ಹೇಳಬೇಕೋ ಅದನ್ನು ಹೇಳುತ್ತಾರೆ. ಹಿಂದೂ ಧರ್ಮ ಮಾತ್ರವಲ್ಲ ಯಾವುದೇ ಧರ್ಮದ ಭಾವನಗೆ ಚ್ಯುತಿ ಬರಬಾರದು. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಧರ್ಮಸ್ಥಳ ಕುರಿತಾದ ಎಲ್ಲ ರಹಸ್ಯಗಳು ಸೋಮವಾರ ಬಯಲಾಗುವ ನಿರೀಕ್ಷೆ ಹುಟ್ಟಿದೆ.
ಈ ಪ್ರಕರಣದಲ್ಲಿ ಬಹಳ ಷಡ್ಯಂತ್ರ ನಡೆದಿದೆ. ಯಾರದ್ದು ಷಡ್ಯಂತ್ರ ಎಂದು ಈಗ ನಾನು ಹೇಳಲ್ಲ. ಬಹಳ ಪ್ಲ್ಯಾನ್ ಮಾಡಿ ಅವರ ಮೇಲೆ ಕಪ್ಪುಚುಕ್ಕೆ ತರಲು ನೋಡುತ್ತಿದ್ದಾರೆ. ಯಾರನ್ನೋ ತೇಜೋವಧೆ ಮಾಡಿ ನೂರಾರು ವರ್ಷದಿಂದ ಬಂದ ಪರಂಪರೆಯನ್ನು ಹಾಳು ಮಾಡಲು ಹೊರಟಿದ್ದಾರೆ ಹೇಳಿಕೆ ನೀಡಿದ್ದರಿಂದ ತನಿಖೆ ನಡೆಯುತ್ತಿದೆ ಎಂದು ಶಿವಕುಮಾರ್ ಸದನದಲ್ಲೇ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ, ಅಶೋಕ್ ರೈ ಮಾತಾಡಿದ್ದಾರೆ. ಯಾರು ಷಡ್ಯಂತ್ರ ಮಾಡುತ್ತಿದ್ದಾರೆ? ಸುಳ್ಳು ಆರೋಪ ಮಾಡುತ್ತಾರೆ ಅವರ ವಿರುದ್ಧ ಆಳಕ್ಕೆ ಆಗಿ ಹೋಗಿ ತನಿಖೆ ಮಾಡಿ ಕಾನೂನು ಕ್ರಮಕ್ಕೆ ಕೈಗೊಳ್ಳಲು ಹೇಳಿದ್ದೇವೆ. ಮುಖ್ಯಮಂತ್ರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದಿದ್ದಾರೆ.
ಏನೂ ಇಲ್ಲದೆ ಬುರುಡೆ ಪ್ರಕರಣ ಮಾಡಿರುವುದು ನಮಗೆ ತಿಳಿದಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ತನಿಖೆ ನಡೆಯುತ್ತಿದೆ. ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ಅವರದ್ದೇ ಯಾದ ವ್ಯಾಖ್ಯಾನ ಮಾಡಿದ್ದಾರೆ. ಅದಕ್ಕೆ ನಾನು ಕಮೆಂಟ್ ಮಾಡಲು ಹೋಗುವುದಿಲ್ಲ. ಧರ್ಮಸ್ಥಳ ಆಗಲಿ ಯಾವುದೇ ಕ್ಷೇತ್ರದ ಗೌರವಕ್ಕೆ ತೊಂದರೆ ಮಾಡಲು ನಾವು ಅವಕಾಶ ನೀಡುವುದಿಲ್ಲ. ನಮ್ಮ ನಿಲುವು ಸ್ಪಷ್ಟವಾಗಿದ್ದು ನ್ಯಾಯದ ಬಗ್ಗೆ ಧರ್ಮದ ಬಗ್ಗೆ ಸರಿಸಮಾನವಾಗಿದ್ದೇವೆ ಎಂದು ಹೇಳಿದ್ದಾರೆ.
ದೇವಸ್ಥಾನ ವಠಾರದಲ್ಲೂ ಮಹಜರು
ಈ ನಡುವೆ ನಿನ್ನೆ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಧರ್ಮಸ್ಥಳ ದೇಗುಲದ ವಠಾರದಲ್ಲಿ ಎಸ್‌ಐಟಿ ಮಹಜರು ಮಾಡಲಾಗಿದೆ. ಗುರುವಾರ ಧರ್ಮಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ಕನ್ಯಾಡಿಯ ಖಾಸಗಿ ತೋಟವನ್ನು ದಾಟಿ ನದಿ ತೀರದ ಅರಣ್ಯ ಪ್ರದೇಶದಲ್ಲಿ ಶೋಧನೆ ನಡೆಸಿದರೂ, ಬುರುಡೆ ಕಳೇಬರ ಪತ್ತೆಯಾಗಿಲ್ಲ.
ಈ ಜಾಗದ ಪರಿಶೀಲನೆಯ ಬಳಿಕ ಎಸ್‌ಐಟಿ ದೂರುದಾರರನ್ನು ದೇವಸ್ಥಾನದ ವಠಾರದಲ್ಲಿರುವ ಮಾಹಿತಿ ಕೇಂದ್ರದ ಬಳಿ ಕರೆ ತಂದಿತು. ಆತ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮಹಜರು ನಡೆಸಲಾಯಿತು. ದೇವಸ್ಥಾನದಲ್ಲಿ 20 ವರ್ಷ ಸ್ವಚ್ಛತಾ ಕೆಲಸ ಮಾಡುತ್ತಿದ್ದ ನೇತ್ರಾವತಿ ವಸತಿ ಗೃಹ ಮತ್ತು ದೇಗುಲದ ಶೌಚಾಲಯದ ಆಸುಪಾಸು ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಲಾಯಿತು.
ತಂಗಿಯನ್ನು ಹುಡುಕಿಕೊಡಿ ಎಂದ ಕಾವಲಮುಡೂರಿನ ವ್ಯಕ್ತಿ
ಇದರ ನಡುವೆಯೇ ವ್ಯಕ್ತಿಯೊಬ್ಬರು ಎಸ್‌ಐಟಿ ಮುಂದೆ ಹಾಜರಾಗಿ, 13 ವರ್ಷದ ಹಿಂದೆ ಧರ್ಮಸ್ಥಳದಲ್ಲಿ ತನ್ನ ಸಹೋದರಿ ಕಾಣೆಯಾಗಿದ್ದಳು ಎಂದು ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಕಾವಲಮುಡೂರು ಗ್ರಾಮದ ಯುವತಿ ಹೇಮಾವತಿ 13 ವರ್ಷಗಳ ಹಿಂದೆ ಕಾಣೆಯಾಗಿದ್ದಾರೆ ಎಂದು ಆಕೆಯ ಸಹೋದರ ನಿತಿನ್ ಎಸ್‌ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 13 ವರ್ಷಗಳ ಹಿಂದೆ ಆಕೆ ನಾಪತ್ತೆಯಾದಾಗ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಿನ್ನ ತಂಗಿ ಸಿಕ್ಕರೆ ತಿಳಿಸುತ್ತೇವೆ ಎಂದು ಹೇಳಿದ್ದರು. 13 ವರ್ಷಗಳ ಹಿಂದೆ ಆಕೆ ಧರ್ಮಸ್ಥಳಕ್ಕೆ ಹೋಗಿ ಬರುತ್ತೇನೆ ಎಂದು ನಮ್ಮ ಊರಿನ ಮಹಿಳೆ ಜೊತೆ ಹೋಗಿದ್ದಳು. ಆದರೆ, ಆ ಮಹಿಳೆ ಮನೆಗೆ ವಾಪಸ್ ಆಗಿದ್ದಾಳೆ. ನನ್ನ ತಂಗಿ ಮರಳಿ ಬಂದಿಲ್ಲ. ಈ ಬಗ್ಗೆ ಆ ಮಹಿಳೆಗೆ ಕೇಳಿದರೆ ಆಕೆ ಕೂಡ ನನಗೆ ಗೊತ್ತಿಲ್ಲ ಎಂದು ಹೇಳುತ್ತಾಳೆ. ಎಸ್‌ಐಟಿ ರಚನೆಯಾದ ಬಳಿಕ ನ್ಯಾಯ ಸಿಗುವ ವಿಶ್ವಾಸ ಬಂದಿದೆ ಎಂದಿದ್ದಾರೆ.