ಕಾರವಾರ :ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಡೆಸಿದ ಶೋಧದ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿ ಹಣ, ಕೆಜಿಗಟ್ಟಲೆ ಚಿನ್ನ ಪತ್ತೆಹಚ್ಚಿದ್ದಾರೆ.
ಶಾಸಕ ಸತೀಶ್ ಸೈಲ್ ಮನೆ ಮತ್ತು ಬ್ಯಾಂಕ್ ಖಾತೆಯಲ್ಲಿದ್ದ 1.68 ಕೋಟಿ ನಗದು, ಮತ್ತು ಅಂದಾಜು 6,20,45,319 ರೂ. ಮೌಲ್ಯದ 6.75 ಕೆಜಿ ಚಿನ್ನವನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚರಾಸ್ತಿ, ಸ್ಥಿರಾಸ್ತಿ ಸೇರಿ ಒಟ್ಟು 14.13 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. ಇಡಿ ಅಧಿಕಾರಿಗಳು 2 ಟ್ರಂಕ್ನಲ್ಲಿ ಚಿನ್ನ, ಹಣ, ದಾಖಲೆ ಕೊಂಡೊಯ್ದಿದ್ದಾರೆ. ಇಡಿ ಶೋಧದ ವೇಳೆ ಹಣಕಾಸು, ದೋಷಾರೋಪ ದಾಖಲೆ, ಇ-ಮೇಲ್ ಹಾಗೂ ಇತರ ದಾಖಲೆಗಳು ಪತ್ತೆಯಾಗಿದ್ದವು.
ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ದೆ ಅವರ ತಂಡ ಸೈಲ್ ವಿರುದ್ಧ ದೂರು ದಾಖಲಿಸಿತ್ತು. ಸತೀಶ್ ಸೈಲ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರು ಹೈಕೋರ್ಟ್ನಲ್ಲಿ ಜಾಮೀನು ಪಡೆದುಕೊಂಡಿದ್ದರು.
ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಪ್ರಕರಣದಲ್ಲಿ ಸತೀಶ್ ಸೈಲ್ ಅವರನ್ನು ದೋಷಿ ಎಂದು ಕಳೆದ ವರ್ಷ ಅಕ್ಟೋಬರ್ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ನಂತರ ಬೇಲೆಕೇರಿ ಅದಿರು ಸಾಗಾಟ ಪ್ರಕರಣ ಸಂಬಂಧಿತ 6 ಪ್ರಕರಣಗಳಲ್ಲಿ ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 44 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿತ್ತು.
ತನಿಖೆ ಮುಂದುವರೆದಿದ್ದು, PMLA ಅಡಿಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ