ರಾಜಸ್ಥಾನ : ಯುಪಿಎಸ್‌ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿದೆ. ಸಾಧಿಸುವ ಛಲವಿದ್ದರೆ ಈ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಸಾಧ್ಯದ ಮಾತಲ್ಲ ಎಂಬುದಕ್ಕೆ ಐಎಎಸ್ ಅಧಿಕಾರಿ ದೀಪೇಶ್ ಕುಮಾರಿ ಉದಾಹರಣಯಾಗಿದ್ದಾರೆ.
ದೀಪೇಶ್ ಕುಮಾರಿ ಅವರು ರಾಜಸ್ಥಾನದ ಭರತ್‌ಪುರದ ಒಂದು ಸಣ್ಣ ಪ್ರದೇಶದವರು. ಅವರಿಗೆ ನಾಲ್ವರು ಒಡಹುಟ್ಟಿದವರಿದ್ದಾರೆ. ಅವರ ತಂದೆ 25 ವರ್ಷಗಳ ಕಾಲ ತಳ್ಳುಗಾಡಿಯಲ್ಲಿ ಕರಿದ ತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಕುಟುಂಬವನ್ನು ನಿರ್ವಹಿಸುತ್ತಿದ್ದರು. ತಮ್ಮ ಉದ್ಯೋಗದಿಂದ ಗಳಿಸಿದ ಹಣದಿಂದಲೇ ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸಿದರು.
ದೀಪೇಶ್ ಕುಮಾರಿ ಐದು ಮಕ್ಕಳಲ್ಲಿ ಹಿರಿಯರು. ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು, ಭರತ್‌ಪುರದ ಶಿಶು ಆದರ್ಶ ವಿದ್ಯಾಮಂದಿರದಲ್ಲಿ ಓದಿದರು. ಅವರು 10ನೇ ತರಗತಿಯಲ್ಲಿ 98% ಮತ್ತು 12ನೇ ತರಗತಿಯಲ್ಲಿ 89% ಅಂಕ ಗಳಿಸಿದರು. ಅವರು ಜೋಧ್‌ಪುರದ ಸರ್ಕಾರಿ ಎಂ.ಬಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮುಗಿಸಿದರು. ನಂತರ ಐಐಟಿ ಬಾಂಬೆಯಲ್ಲಿ ಎಂ.ಟೆಕ್ ಓದಿದರು. ಇದರ ನಂತರ ಅವರು ಒಂದು ವರ್ಷ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿ, ರಾಜೀನಾಮೆ ನೀಡಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದರು.
ದೆಹಲಿಯಲ್ಲಿ ಯುಪಿಎಸ್‌ಸಿ ಕೋಚಿಂಗ್ ಪಡೆದ ದೀಪೇಶ್, ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಮನೆಗೆ ಮರಳಿದರು. ಮನೆಯಲ್ಲಿಯೇ ತಮ್ಮ ಸಿದ್ಧತೆಗಳನ್ನು ಮುಂದುವರೆಸಿದರು. ಅವರು ಐಚ್ಛಿಕ ವಿಷಯವಾಗಿ ಗಣಿತವನ್ನು ಆಯ್ಕೆ ಮಾಡಿದ್ದರು. ಮೊದಲ ಪ್ರಯತ್ನದಲ್ಲಿ ಸಂದರ್ಶನ ಸುತ್ತಿನಲ್ಲಿ ಅವರು ವಿಫಲರಾದರು. ಆದರೆ 2021ರಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ 93ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಉತ್ತೀರ್ಣರಾದರು. ಈ ಮೂಲಕ ಅವರು ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾದರು.
ಸದ್ಯ ದೀಪೇಶ್ ಕುಮಾರಿ ಅವರ ಒಡಹುಟ್ಟಿದವರೆಲ್ಲರೂ ಉತ್ತಮ ಉದ್ಯೋಗದಲ್ಲಿದ್ದಾರೆ. ದೀಪೇಶ್ ಕುಮಾರಿಯ ಸಹೋದರಿಯರಲ್ಲಿ ಒಬ್ಬರು ವೈದ್ಯರು ಮತ್ತು ಇನ್ನೊಬ್ಬ ಸಹೋದರಿ ಹಾಗೂ ಒಬ್ಬ ಸಹೋದರ ಎಂಬಿಬಿಎಸ್ ಓದುತ್ತಿದ್ದಾರೆ.