ನವದೆಹಲಿ : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಭಾನುವಾರ ಮುಂಜಾನೆ ಅಮೆರಿಕದಿಂದ ಭಾರತಕ್ಕೆ ಬಂದಿಳಿದಿದ್ದಾರೆ. ನವದೆಹಲಿ ವಿಮಾನ ನಿಲ್ದಾಣ ತಲುಪಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ವಿದ್ಯಾರ್ಥಿಗಳ ಗುಂಪು ಶುಭಾಂಶು ಶುಕ್ಲಾ ಅವರಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ.
ಅಮೆರಿಕದಿಂದ ಮಧ್ಯರಾತ್ರಿ 1:30ರ ವೇಳೆಗೆ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾಗೆ ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ದೂರಿ ಸ್ವಾಗತ ದೊರೆತಿದೆ. ಶುಭಾಂಶು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಇದಾದ ನಂತರ ಅವರು ಲಕ್ನೋಗೆ ತೆರಳಲಿದ್ದಾರೆ. ಭಾರತದ ಗಗನಯಾನ ಮಿಷನ್‌ಗೆ ಆಯ್ಕೆಯಾದ ಮತ್ತೊಬ್ಬ ಗಗನಯಾತ್ರಿ ಶುಭಾಂಶು ಜೊತೆಗೆ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ಭಾರತಕ್ಕೆ ಮರಳಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಜೂನ್ 25 ರಂದು ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಹೊರಟು ಜೂನ್ 26 ರಂದು ಐಎಸ್‌ಎಸ್ ನೊಂದಿಗೆ ಸಂಪರ್ಕ ಸಾಧಿಸಿದ ನಾಸಾದ ಆಕ್ಸಿಯಮ್ -4 ಖಾಸಗಿ ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿದ್ದರು.
ಅವರು, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರೊಂದಿಗೆ 18 ದಿನಗಳ ಕಾರ್ಯಾಚರಣೆಯಲ್ಲಿ 60 ಕ್ಕೂ ಹೆಚ್ಚು ಪ್ರಯೋಗಗಳು ಮತ್ತು 20 ಸಾರ್ವಜನಿಕ ಸಂಪರ್ಕ ಅವಧಿಗಳನ್ನು ನಡೆಸಿದರು. ಜುಲೈ 15 ರಂದು ಶುಭಾಂಶು ಭೂಮಿಗೆ ಹಿಂದಿರುಗಿದ್ದರು.