ಬೆಂಗಳೂರು : ಧರ್ಮಸ್ಥಳದಲ್ಲಿ ಶವ ಶೋಧ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಘೋಷಿಸಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, “ಧರ್ಮಸ್ಥಳ ಒಂದು ದೇವಸ್ಥಾನಕ್ಕೆ ಕೋಟಿ ಭಕ್ತರು ಇದ್ದಾರೆ. ಸಮಾಜದಲ್ಲಿ ಅದಕ್ಕೇ ಆದ ಸ್ಥಾನ ಇದೆ. 2025ರ ಜು.3 ರಂದು ಒಬ್ಬ ವ್ಯಕ್ತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಅದರಲ್ಲಿ ನನಗೆ ನಿರಂತರ ಪ್ರಾಣ ಬೆದರಿಕೆ ಹಾಕಿ ಧರ್ಮಸ್ಥಳ ಹಾಗೂ ಸುತ್ತಮುತ್ತ ಕೊಲೆಯಾದ ಅನೇಕ ಹೆಣ್ಣುಮಕ್ಕಳ ಶವಗಳನ್ನು ನನ್ನಿಂದ ಹೂಳಿಸಲಾಗಿದೆ ಅಂತ ವ್ಯಕ್ತಿ ದೂರು ಕೊಟ್ಟ. ಪಶ್ಚಾತ್ತಾಪದಿಂದ ದೂರು ಕೊಡುತ್ತಿರುವುದಾಗಿ ಹೇಳಿದ. ಕೊಲೆಯಾದ ಅನೇಕ ಪುರುಷರು, ಅತ್ಯಾಚಾರಕ್ಕೊಳಗಾದ ಅನೇಕ ಹೆಣ್ಣುಮಕ್ಕಳ ಬಗ್ಗೆ ತನಿಖೆ ಮಾಡಿ ಅಂತ ದೂರಿನಲ್ಲಿ ಉಲ್ಲೇಖಿಸಿದ್ದ. ನಂತರ ದೂರು ಆಧರಿಸಿ ಎಫ್ಐಆರ್ ದಾಖಲಾಯಿತು. ನಿರಂತರ ಪ್ರಾಣ ಬೆದರಿಕೆ ಇದೆ ನನಗೆ, ಶವಗಳನ್ನು ಹೂತು ಹಾಕಿಸಿದ್ರು ನನ್ನಿಂದ ಅನ್ನೋದು ದೂರಿನ ಸಾರಾಂಶ. ಕೋರ್ಟಿನಲ್ಲೂ ಆ ವ್ಯಕ್ತಿಯಿಂದ ಹೇಳಿಕೆ ನೀಡಲಾಯಿತು. ಮ್ಯಾಜಿಸ್ಟ್ರೇಟ್ ಅವರು ತನಿಖೆಗೆ ಆದೇಶ ಮಾಡಿದರು. ಪೊಲೀಸರಿಂದ ತನಿಖೆ ಆರಂಭಿಸಲಾಯಿತು. ಈ ಮಧ್ಯೆ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ ಬಂದಿತು. ಧರ್ಮಸ್ಥಳದಲ್ಲಿ ಶವಗಳನ್ನು ಹೂಳಿರುವ ಬಗ್ಗೆ ವ್ಯಕ್ತಿಯ ಹೇಳಿಕೆ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ವರದಿಗಳು ಬರ್ತಿವೆ. ಹಾಗಾಗಿ, ಎಸ್ಐಟಿ ರಚಿಸಿ ಅಂತ ಮಹಿಳಾ ಆಯೋಗ ಮನವಿ ಮಾಡಿತು” ಎಂದು ತಿಳಿಸಿದರು.
“ಇದಾದ ನಂತರ ನಾನು, ಸಿಎಂ ಚರ್ಚಿಸಿದೆವು. ನಂತರ ಎಸ್ಐಟಿಗೆ ಆದೇಶ ಮಾಡಿದೆವು. ಅದಕ್ಕೆ ಏನೇನು ತನಿಖೆ ಮಾಡಬೇಕು ಅಂತ ಟರ್ಮ್ಸ್ ಆಫ್ ರೆಫರೆನ್ಸ್ ನಿಗದಿ ಮಾಡಿದ್ದೇವೆ. ಜು.19 ರಂದು ಎಸ್ಐಟಿ ರಚಿಸಲಾಗಿದೆ. ಎಸ್ಐಟಿ ತಂಡದಿಂದ ಸೌಮ್ಯಲತಾ ಪತ್ರ ಬರೆದು ಬದಲಾವಣೆಗೆ ಕೋರಿದರು. ಅವರ ಬದಲಾವಣೆ ಆಗಿದೆ. ಧರ್ಮಸ್ಥಳ ಪೊಲೀಸರ ವ್ಯಾಪ್ತಿಯಲ್ಲಿ ಇದ್ದ ಕೇಸ್ ಎಸ್ಐಟಿಗೆ ಹೋಗುತ್ತೆ. ಎಸ್ಐಟಿಯವರು ಮತ್ತೆ ಆ ವ್ಯಕ್ತಿ ಕರೆದು ಹೇಳಿಕೆ ಪಡೆಯುತ್ತಾರೆ. ಅದರಲ್ಲಿ ಎಲ್ಲೆಲ್ಲಿ ಶವ ಹೂತು ಹಾಕಿದ್ದ ಅಂತ ಹೇಳ್ತಾನೆ. ಆತ ಹೇಳಿದ ಪಾಯಿಂಟ್ಗಳ ಮ್ಯಾಪ್ ಹಾಕಿಕೊಳ್ತಾರೆ. ಅಸ್ಥಿಪಂಜರಗಳನ್ನು ತೆಗೆಯಲು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಯುತ್ತದೆ. ಎರಡು ಜಾಗಗಳಲ್ಲಿ ಅಸ್ಥಿಪಂಜರ ಸಿಗುತ್ತದೆ. ಒಂದರಲ್ಲಿ ಅಸ್ಥಿಪಂಜರ ಸಿಗುತ್ತೆ, ಅದನ್ನು ಎಫ್ಎಸ್ಎಲ್ಗೆ ಕಳಿಸಿಕೊಡ್ತಾರೆ. ಎರಡನೇ ಜಾಗದಲ್ಲೂ ಒಂದಷ್ಟು ಮೂಳೆಗಳು ಸಿಗ್ತವೆ, ಅದನ್ನೂ ಎಫ್ಎಸ್ಎಲ್ಗೆ ಕಳಿಸ್ತಾರೆ ಎಂದು ವಿವರಿಸಿದರು.
“ಇನ್ನೊಂದಷ್ಟು ಕಡೆಯೂ ಮಣ್ಣು ಸಂಗ್ರಹಿಸಿ ಲ್ಯಾಬ್ಗೆ ಕಳಿಸಲಾಗಿದೆ. ಅಸ್ಥಿಪಂಜರದ ಪರಿಶೀಲನೆ ಆಗಬೇಕು, ಸ್ಯಾಂಪಲ್ಗಳ ಅನಾಲಿಸಿಸ್ ಆಗಬೇಕು. ಆಗ ಮಾತ್ರ ತನಿಖೆ ಪ್ರಾರಂಭ ಆಗಿದೆ ಅಂತ ಹೇಳಬಹುದು. ಇನ್ನೂ ಎಫ್ಎಸ್ಎಲ್ ವರದಿ ಬಂದಿಲ್ಲ, ವರದಿ ಬಂದನಂತರ ಮುಂದಿನ ತನಿಖೆ. ಇಲ್ಲಿಯ ವರೆಗೆ ಆಗಿರೋದು ಉತ್ಖನನ ಅಷ್ಟೇ, ತನಿಖೆ ಅಲ್ಲ. ಇನ್ನು ಆ ವ್ಯಕ್ತಿ ನಿತ್ಯ ಬರ್ತಾನೆ ಹೋಗ್ತಾನೆ, ಯಾಕೆ ವಶಕ್ಕೆ ಪಡೆದಿಲ್ಲ ಅಂತ ವಿಪಕ್ಷದವರು ಪ್ರಶ್ನೆ ಮಾಡಿದ್ದಾರೆ. ವಿಟ್ನೆಸ್ ಪ್ರೊಟೆಕ್ಷನ್ ಆಕ್ಟ್ ನಂತೆ ಕ್ರಮವಹಿಸಲಾಗಿದೆ. ವಿಟ್ನೆಸ್ ಪ್ರೊಟೆಕ್ಷನ್ ಆಕ್ಟ್ ಪ್ರಕಾರ ನಡೆದುಕೊಂಡಿದ್ದೇವೆ. ಹಾಗಾಗಿ ಬಂಧಿಸಿಲ್ಲ. ಪಾರದರ್ಶಕ ತನಿಖೆ, ಯಾರ ಒತ್ತಡಕ್ಕೂ ಮಣಿಯದೇ, ಯಾರ ಮಧ್ಯಪ್ರವೇಶ ಇಲ್ಲದೇ ತನಿಖೆ ನಡೀತಿದೆ. ಇನ್ನೂ ಎಷ್ಟು ಅಗೆಯುತ್ತೀರಿ ಅಂತ ಹಲವರು ಕೇಳ್ತಿದ್ದಾರೆ. ಮುಂದೆಯೂ ಗುಂಡಿ ಅಗೆಯಬೇಕಾ ಬೇಡವಾ ಅಂತ ಸರ್ಕಾರ ತೀರ್ಮಾನ ಮಾಡಲ್ಲ, ಎಸ್ಐಟಿ ತೀರ್ಮಾನ ಮಾಡುತ್ತೆ” ಎಂದು ಸ್ಪಷ್ಟನೆ ನೀಡಿದರು.