ರಿಷಬ್ ಶೆಟ್ಟಿ ಸಾರಥ್ಯದ ‘ಕಾಂತಾರ ಚಾಪ್ಟರ್ 1’ರಲ್ಲಿ ಕುಲಶೇಖರ್ ಪಾತ್ರದಲ್ಲಿ ಬಾಲಿವುಡ್ ನಟ ಗುಲ್ಶನ್ ದೇವಯ್ಯ ನಟಿಸಿದ್ದು, ಇಂದು ಚಿತ್ರತಂಡ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಅಧಿಕೃತವಾಗಿ ಪಾತ್ರ ಪರಿಚಯಿಸಿದೆ.
‘ಕಾಂತಾರ ಚಾಪ್ಟರ್ 1’. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ತನ್ನ ಪ್ರಚಾರ ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ನಟಿ ರುಕ್ಮಿಣಿ ವಸಂತ್ ಅವರನ್ನು ಕನಕವತಿಯಾಗಿ ಪರಿಚಯಿಸಿದ್ದ ಚಿತ್ರತಂಡ, ಇದೀಗ ಕುಲಶೇಖರ ಪಾತ್ರ ಪರಿಚಯಿಸುವ ಪೋಸ್ಟರ್ ಅನಾವರಣಗೊಳಿಸಿದೆ.
ಬಾಲಿವುಡ್ನಲ್ಲಿ ವಿಭಿನ್ನ ಚಿತ್ರಗಳ ಮೂಲಕ ಗಮನ ಸೆಳೆದಿರುವ, ಕರ್ನಾಟಕದವರೇ ಆಗಿರುವ ನಟ ಗುಲ್ಶನ್ ದೇವಯ್ಯ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪೋಸ್ಟರ್ ಹಂಚಿಕೊಂಡ ಚಿತ್ರತಂಡ, ‘ಕುಲಶೇಖರನಾಗಿ ಗುಲ್ಶನ್ ದೇವಯ್ಯ’ ಎಂದು ಬರೆದುಕೊಂಡಿದೆ.
ರಿಷಬ್ ಶೆಟ್ಟಿ ಸಾರಥ್ಯದ ‘ಕಾಂತಾರ ಚಾಪ್ಟರ್ 1’, ಜಾಗತಿಕವಾಗಿ ಮೆಚ್ಚುಗೆ ಗಳಿಸಿದ ‘ಕಾಂತಾರ’ (2022)ದ ಹಿಂದಿನ ಅಧ್ಯಾಯವಾಗಿದ್ದು, ಹೊಂಬಾಳೆ ಫಿಲ್ಮ್ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಈ ಚಿತ್ರವು ಸಂಸ್ಕೃತಿ, ಜಾನಪದ ಮತ್ತು ಅದ್ಭುತ ಕಥಾಹಂದರದ ಆಳವಾದ ಪದರಗಳನ್ನು ಪರಿಶೋಧಿಸಲಿದೆ.
ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಕಾಂತಾರ ಚಾಪ್ಟರ್ 1’ ಪ್ರಬಲ ನಿರೂಪಣೆ ಮತ್ತು ಅದ್ಭುತ ದೃಶ್ಯಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧವಾಗಿದೆ. ಗುಲ್ಶನ್ ದೇವಯ್ಯ ಅವರ ಆಗಮನವು ಚಿತ್ರದ ದೊಡ್ಡ ಜಗತ್ತಿಗೆ ಹೊಸ ಆಯಾಮ ಸೇರಿಸಿದೆ.
ಈ ಚಿತ್ರವು ಅಕ್ಟೋಬರ್ 2ರಂದು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಯಾರು ಈ ಗುಲ್ಶನ್ ದೇವಯ್ಯ?
ಕನ್ನಡಿಗ ಗುಲ್ಶನ್ ದೇವಯ್ಯ ಬಾಲಿವುಡ್‌ನಲ್ಲಿ ಚಿರಪರಿಚಿತ ಹೆಸರು. ಬೆಂಗಳೂರಿನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಗುಲ್ಶನ್ ದೇವಯ್ಯ ಪ್ರಸಾದ್ ಬಿದಪ್ಪ ಅವರ ಗರಡಿಯಲ್ಲಿ ಪಳಗಿದವರು. 2004 ರಲ್ಲಿ ಬಿಡುಗಡೆ ಆದ ಸಲ್ಮಾನ್ ಖಾನ್ ರ ‘ದಿಲ್ ನೆ ಜಿಸೆ ಅಪ್ನಾ ಕಹಾ’ ಸಿನಿಮಾದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ಗುಲ್ಶನ್ ದೇವಯ್ಯ 2010 ರಲ್ಲಿ ಬಂದ ಕಲ್ಕಿ ಕೊಚ್ಚಿನ್ ನಟಿಸಿ ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದ ‘ದಿ ಗರ್ಲ್ ಇನ್ ಯೆಲ್ಲೊ ಬೂಟ್ಸ್’ ಸಿನಿಮಾ ಮೂಲಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾಗಳ ಜೊತೆಗೆ ಹಲವು ವೆಬ್ ಸರಣಿಗಳಲ್ಲಿಯೂ ಸಹ ಗುಲ್ಶನ್ ನಟಿಸಿದ್ದಾರೆ.