ಬೆಂಗಳೂರು: ಪಂಚ ಗ್ಯಾರಂಟಿಗಳಿಂದಾಗಿ ಸಿದ್ದರಾಮಯ್ಯ ಸರ್ಕಾರದ ವಿತ್ತೀಯ ಕೊರತೆ ಹೆಚ್ಚಳವಾಗಿದೆ ಎಂಬುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಯುವ ನಿಧಿ ಹಾಗೂ ಗೃಹ ಜ್ಯೋತಿಯಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಬೆಳಕಿಗೆ ಬಂದಿದೆ.
ಈ ಪಂಚ ಗ್ಯಾರಂಟಿಗಳಿಗಾಗಿ ರಾಜ್ಯ ಸರ್ಕಾರ, 2023-24ರಲ್ಲಿ ಬರೋಬ್ಬರಿ 63,000 ಕೋಟಿ ರೂಪಾಯಿ ಸಾಲ ಮಾಡಿರುವುದು ಸಿಎಜಿ ವರದಿಯಿಂದ ಬೆಳಕಿಗೆ ಬಂದಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕದ ಸಂಪನ್ಮೂಲಗಳ ಮೇಲೆ ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ. 2023-24ನೇ ಸಾಲಿನಲ್ಲಿ 5 ಗ್ಯಾರಂಟಿಗಳಿಗೆ ಸಾಲ ಮಾಡಿರುವುದು ಬೆಳಕಿಗೆ ಬಂದಿದ್ದು, ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ ಬರೋಬ್ಬರಿ 63,000 ಕೋಟಿ ಸಾಲ ಮಾಡಿದ್ದಾಗಿ CAG ವರದಿಯಲ್ಲಿ ಉಲ್ಲೇಖವಾಗಿದೆ.
5 ಗ್ಯಾರಂಟಿ ಯೋಜನೆಗೆ ಕಳೆದ ವರ್ಷದ ಸಾಲಿನಲ್ಲಿ ಹೆಚ್ಚುವರಿ ಸಾಲ ಮಾಡಲಾಗಿದ್ದು, ಗ್ಯಾರಂಟಿ ಯೋಜನೆಗಳಿಂದ ವಿತ್ತೀಯ ಕೊರತೆ ಹೆಚ್ಚಳವಾಗಿದೆ. ವಿತ್ತೀಯ ಕೊರತೆ 46,623 ಕೋಟಿಯಿಂದ 65,522 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ ಎಂದು ಸಿಎಂ ಮಂಡಿಸಿದ ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ. 2023-24 ಸಾಲಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ 16,964 ಕೋಟಿ ರೂ., ಗೃಹಜ್ಯೋತಿಗೆ 8,900 ಕೋಟಿ, ಅನ್ನಭಾಗ್ಯಕ್ಕೆ 7,384 ಕೋಟಿ, ಶಕ್ತಿ ಯೋಜನೆಗೆ 3200 ಕೋಟಿ, ಯುವನಿಧಿಗೆ 88 ಕೋಟಿ ರೂ. ಹೊರೆಯಾಗಿದೆ.
ಗ್ಯಾರಂಟಿ ಯೋಜನೆಗಳು, ಅದರಿಂದ ಉಂಟಾದ ಕೊರತೆಗಳಿಗೆ ಹಣ ಒದಗಿಸಲು 63,000 ಕೋಟಿ ರೂ. ನಿವ್ವಳ ಮಾರುಕಟ್ಟೆ ಸಾಲ ಪಡೆಯಲಾಗಿದೆ. 2022-23ನೇ ಸಾಲಿನ ನಿವ್ವಳ ಸಾಲಕ್ಕಿಂತ 37,000 ಕೋಟಿ ರೂ. ಹೆಚ್ಚಳವಾಗಿದೆ. 2022-23ನೇ ಸಾಲಿಗೆ ಹೋಲಿಸಿದರೆ ಗ್ಯಾರಂಟಿ ಯೋಜನೆಗಳು, ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚ 5,229 ಕೋಟಿ ರೂ.ಗಳಷ್ಟು ಕಡಿಮೆ ಮಾಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ. 2022-23ನೇ ಸಾಲಿಗೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ಸ್ವಂತ ತೆರಿಗೆ ಆದಾಯ ಅಥವಾ ಸಂಪನ್ಮೂಲಗಳ ಸ್ವೀಕೃತಿಯಲ್ಲಿ ಹೆಚ್ಚಳವಾಗಿದೆ.
2023-24ನೇ ಸಾಲಿನಲ್ಲಿ ಒಟ್ಟು ರಾಜಸ್ವ ಸ್ವೀಕೃತಿಗಳಲ್ಲಿ ರಾಜ್ಯದ ಸ್ವಂತ ಸಂಪನ್ಮೂಲಗಳ ಪ್ರಮಾಣ ಶೇ. 76ರಷ್ಟಿದ್ದು, 2022-23ಕ್ಕೆ ಹೋಲಿಸಿದರೆ ಸ್ವಂತ ತೆರಿಗೆ ಆದಾಯ ಶೇ. 13.78ರಷ್ಟು ಹೆಚ್ಚಳವಾಗಿದೆ ಹಾಗೂ ಕೇಂದ್ರ ತೆರಿಗೆ ವರ್ಗಾವಣೆಯು ಶೇ. 19.07ರಷ್ಟು ಹೆಚ್ಚಳವಾಗಿದೆ. ಆದರೆ, ತೆರಿಗೇತರ ಆದಾಯವು 2022-23ರಲ್ಲಿ 13,914 ಕೋಟಿ ರು.ಗಳಷ್ಟಿದ್ದರೆ 2023-24ರಲ್ಲಿ 13,117 ಕೋಟಿ ರು.ಗೆ ಕುಸಿದಿದ್ದು, ಒಟ್ಟಾರೆ 797 ಕೋಟಿ ರೂ. ಇಳಿಕೆಯಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
2023-24ರಲ್ಲಿ ರಾಜ್ಯದ ಆದಾಯವು ಕಳೆದ ವರ್ಷಕ್ಕಿಂತ ಶೇ.1.86 ರಷ್ಟು ಹೆಚ್ಚಳವಾಗಿದೆ. ಖರ್ಚು ಶೇ.12.54 ರಷ್ಟು ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಆದಾಯಕ್ಕೆ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲದೇ ಮುಂದೆ ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಆರ್ಥಿಕತೆಯ ಮೇಲೆ ಒತ್ತಡ ಬೀಳುತ್ತದೆ ಎಂದು ಸಿಎಜಿ ವರದಿ ಹೇಳಿದೆ.