ಉತ್ತರ ಪ್ರದೇಶ : ಪ್ರತಿ ವರ್ಷ ಅನೇಕ ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಕೆಲ ಅಭ್ಯರ್ಥಿಗಳು ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ಅಂತಹವರು ಕೆಲವು ಪ್ರಯತ್ನಗಳ ನಂತರ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ತಮ್ಮ ಮೂರನೇ ಪ್ರಯತ್ನದಲ್ಲಿ 26ನೇ ರ‍್ಯಾಂಕ್ ಪಡೆದು ದೆಹಲಿ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಗಳು ರೂಪಲ್ ರಾಣಾ ಅವರ ಯಶೋಗಾಥೆ ಇದು.
ರೂಪಲ್ ರಾಣಾ ಅವರು ಉತ್ತರ ಪ್ರದೇಶದ ಬಾಗ್‌ಪತ್‌ನ ಬರೂದ್ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದವರು. ಅವರು ಬಾಗ್‌ಪತ್‌ನ ಜೆಪಿ ಪಬ್ಲಿಕ್ ಶಾಲೆಯಲ್ಲಿ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 10ನೇ ತರಗತಿಯಲ್ಲಿ 10 ಸಿಜಿಪಿಎ ಪಡೆದರು. ನಂತರ ಪಿಲಾನಿಯ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ನಿಂದ 11 ಮತ್ತು 12ನೇ ತರಗತಿ ಶಿಕ್ಷಣವನ್ನು ಪಡೆದರು.
ನಂತರ ರೂಪಲ್ ಅವರು ದೇಶಬಂಧು ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದರು. ರೂಪಲ್ ಅವರು ಯೂನಿವರ್ಸಿಟಿಗೆ ಟಾಪರ್ ಆಗಿದ್ದರು. ರೂಪಲ್ ರಾಣಾ ಅವರ ತಂದೆ ಜಸ್ವೀರ್ ರಾಣಾ ದೆಹಲಿ ಪೊಲೀಸ್‌ನಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ. ರೂಪಲ್ ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಾಯಿ ಅಂಜು ರಾಣಾ ಅವರನ್ನು ಕಳೆದುಕೊಂಡರು. ಅವರಿಗೆ ರಿಷಬ್ ರಾಣಾ ಎಂಬ ಸಹೋದರ ಮತ್ತು ಒಬ್ಬ ಸಹೋದರಿ ಇದ್ದಾರೆ.
ರೂಪಲ್ ಪದವಿಯ ನಂತರ ಯುಪಿಎಸ್‌ಸಿಗಾಗಿ ತಯಾರಿ ಆರಂಭಿಸಿದರು. ಅವರು ತಮ್ಮ ಐಚ್ಛಿಕ ವಿಷಯವಾಗಿ ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ಆರಿಸಿಕೊಂಡರು. ಕಷ್ಟದ ಸಮಯದಲ್ಲಿ ರೂಪಲ್ ಅವರ ಮನೋಬಲ ಹೆಚ್ಚಿಸುವಲ್ಲಿ ತಾಯಿ ಅಂಜು ರಾಣಾ ಪ್ರಮುಖ ಪಾತ್ರ ವಹಿಸಿದ್ದರು. ರೂಪಲ್ ಯಶಸ್ವಿಯಾಗಬೇಕೆಂದು ಅಂಜು ಬಯಸಿದ್ದರು. ಯುಪಿಎಸ್‌ಸಿ ಮೇನ್ಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ, ರೂಪಲ್ ಅವರ ತಾಯಿ ಅನಾರೋಗ್ಯಕ್ಕೆ ಒಳಗಾದರು. ಇದರಿಂದ ರೂಪಲ್ ಕಷ್ಟ ಅನುಭವಿಸುವಂತಾಯಿತು. ಅವರು ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಆರೈಕೆ ಮಾಡುತ್ತಲೇ ಮೇನ್ಸ್ ಪರೀಕ್ಷೆಗೆ ತಯಾರಿ ಮುಂದುವರೆಸಿದರು.
ರೂಪಲ್ ಅವರು ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾದರು. ಆದರೆ ತಮ್ಮ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗುವಲ್ಲಿ ವಿಫಲರಾದರು. ನಂತರ ಎರಡನೇ ಪ್ರಯತ್ನದಲ್ಲಿಯೂ ವಿಫಲರಾದರು. ಆದಾಗ್ಯೂ, ಅವರು ಭರವಸೆ ಕಳೆದುಕೊಳ್ಳದೆ ತಮ್ಮ ಸಿದ್ಧತೆಗಳನ್ನು ಮುಂದುವರೆಸಿದರು. ಅಂತಿಮವಾಗಿ 2023 ರಲ್ಲಿ ಮೂರನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ರೂಪಲ್ ಅವರು, 26ನೇ ರ‍್ಯಾಂಕ್ ಗಳಿಸಿ ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ರೂಪಲ್ ಯಶಸ್ವಿಯಾಗುತ್ತಾರೆ.