ಮಂಗಳೂರು: ಸಾರ್ವಜನಿಕ ಸಮಾರಂಭಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಷರತ್ತು ವಿದಿಸಿರುವುದನ್ನು ಖಂಡಿಸಿ, ಸಾರ್ವಜನಿಕ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಸಂಘಟನೆಗಳ ನಿರ್ಧಾರದ ಕುರಿತಂತೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಬಹಿಷ್ಕಾರ ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಸ್ವತಂತ್ರರಾಗಿದ್ದಾರೆ. ಆದರೆ ಕಾನೂನು ಸ್ಪಷ್ಟವಾಗಿದ್ದು, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ಸಾರ್ವಜನಿಕರು, ಹಿರಿಯ ನಾಗರಿಕರು, ರೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಆಚರಣೆಗಳು ನಡೆಯುವಂತೆ ನೋಡಿಕೊಳ್ಳಲು ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವ ಕೆಲವು ವ್ಯವಸ್ಥೆಗಳನ್ನು ಮಾಡುತ್ತೇವೆ ಎಂದು ಭರವನೆ ನೀಡಿದ್ದಾರೆ.
ಗಣೇಶ ಹಬ್ಬದ ಆಯೋಜಕರ ಸಭೆ ಇಂದು ನಡೆಯಲಿದ್ದು, ಈ ಸಭೆಯಲ್ಲಿ ಡಿಸಿಪಿ, ಹೆಚ್ಚುವರಿ ಎಸ್ಪಿ ಡಿಕೆ ಮತ್ತು ಎಸಿಪಿಗಳು ಭಾಗವಹಿಸಲಿದ್ದು, ಇಲ್ಲಿ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ನಿಯಮಗಳಿವೆ ನಿಜ, ಆದರೆ ನಿಯಮಗಳಿಗೆ ಕೆಲವು ವಿನಾಯಿತಿಗಳನ್ನು ಸಮರ್ಥನೀಯ ಕಾರಣಗಳಿಗಾಗಿ ನೀಡಬಹುದು. ಆದರೆ ವಿನಾಯಿತಿಗಳೇ ನಿಯಮಗಳಾಗಲು ಸಾಧ್ಯವಿಲ್ಲ ಎಂದು ಕಮೀಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
