ನವದೆಹಲಿ : ಇಸ್ರೋ 2035ರ ವೇಳೆಗೆ ಭಾರತ ಸ್ವಂತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲು ಯೋಜಿಸಿದೆ. 2040ರ ವೇಳೆಗೆ ಈ ನಿಲ್ದಾಣವನ್ನು ಸಂಪೂರ್ಣವಾಗಿ ಕಾರ್ಯಾಚರಣೆಗೆ ತರಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಪ್ರಯುಕ್ತ ದೆಹಲಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಪ್ರಧಾನಿ ಮೋದಿ ಅವರು ಮುಂದಿನ ಪೀಳಿಗೆಯ ಉಡಾವಣಾ ವಾಹನಕ್ಕೆ ಅನುಮೋದನೆ ನೀಡಿದ್ದಾರೆ. ಭಾರತವು 2040ರ ವೇಳೆಗೆ ಚಂದ್ರನ ಮೇಲೆ ಇಳಿಯಲಿದೆ. 2040ರ ವೇಳೆಗೆ ಭಾರತ ಚಂದ್ರನ ಮೇಲೆ ಇಳಿಯಲಿದ್ದು, ನಾವು ಸುರಕ್ಷಿತವಾಗಿ ಹಿಂದಿರುಗಲಿದ್ದೇವೆ. ಆ ಮೂಲಕ ಭಾರತವು ವಿಶ್ವದ ಯಾವುದೇ ಇತರ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸಮನಾಗಿರುತ್ತದೆ” ಎಂದರು.
“ಚಂದ್ರಯಾನ-3ರ ಯಶಸ್ಸಿನ ಬೆನ್ನಿಗೆ, 2028ರ ಇಸ್ರೋ ಚಂದ್ರಯಾನ-4 ಯೋಜನೆಯನ್ನು ಜಾರಿಗೆ ತರಲು ಇಸ್ರೋ ಯೋಜಿಸಿದೆ. ಈ ಯೋಜನೆಯು ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರಲು ಗುರಿಯಿಟ್ಟಿದೆ, ಇದು ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ” ಎಂದು ಹೇಳಿದರು.
“ಗಗನಯಾನ ಯೋಜನೆಯು 2026ರ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಕಕ್ಷೆಗೆ ಕಳುಹಿಸುವ ಗುರಿ ಹೊಂದಿದೆ. ಈ ಯೋಜನೆಯು ಭಾರತವನ್ನು ಮಾನವ ಬಾಹ್ಯಾಕಾಶ ಯಾತ್ರೆಯ ಸಾಮರ್ಥ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರಿಸಲಿದೆ. ಈಗಾಗಲೇ ತರಬೇತಿಯಲ್ಲಿರುವ ಗಗನಯಾತ್ರಿಗಳು ಈ ಐತಿಹಾಸಿಕ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.
“ಇಸ್ರೋ ಶುಕ್ರ ಗ್ರಹದ ಸಂಶೋಧನೆಗಾಗಿ ಶುಕ್ರಯಾನ ಮತ್ತು ಮಂಗಳಯಾನ-2 ಯೋಜನೆಗಳ ಮೇಲೆಯೂ ಕೆಲಸ ಮಾಡುತ್ತಿದೆ. ಇವುಗಳ ಜೊತೆಗೆ, ಸೌರ ವೀಕ್ಷಣೆಗಾಗಿ ಆದಿತ್ಯ-ಎಲ್1 ರಂತಹ ಯೋಜನೆಗಳು ಭಾರತದ ವೈಜ್ಞಾನಿಕ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಲಿವೆ. ಇಸ್ರೋದ ಈ ದೂರದೃಷ್ಟಿಯ ಯೋಜನೆಗಳು ಭಾರತವನ್ನು ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿಗೆ ತರುವ ಗುರಿಯನ್ನು ಹೊಂದಿವೆ” ಎಂದು ನುಡಿದರು.