ಮುಂಬೈ: ಪರಿಪೂರ್ಣ ಟೆಸ್ಟ್ ಆಟದ ಕೊನೆಯ ಕೊಂಡಿ ಎಂದೇ ಅರಿಯಲ್ಪಡುತ್ತಿದ್ದ ಪ್ರತಿಭಾವಂತ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ಇಂದು ನಿವೃತ್ತಿ ಘೋಷಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ.
ಈ ವರ್ಷ ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಈಗ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ದಿಢೀರ್ ಎಂದು ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನ ಸುಂದರ ಅಧ್ಯಾಯವೊಂದು ಮುಕ್ತಾಯವಾದಂತಾಗಿದೆ. ಏಕದಿನ, ಟ್ವೆಂಟಿ 20 ಜಮಾನದಲ್ಲೂ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಪೂಜಾರ ಕೊಟ್ಟ ಕೊಡುಗೆ ಹಿರಿದಾದುದು.
ಟೆಸ್ಟ್‌ನಲ್ಲಿ 43.60 ಸರಾಸರಿಯಲ್ಲಿ 7,195 ರನ್ ಗಳಿಸಿರುವ ಪೂಜಾರ ಭಾರತದ ಎಂಟನೇ ಅತ್ಯಧಿಕ ಟೆಸ್ಟ್ ರನ್ ಸ್ಕೋರ್ ಮಾಡಿದ ಆಟಗಾರ ಎಂಬ ಹಿರಿಮೆಯನ್ನು ಹೊಂದಿದ್ದಾರೆ. ರನ್ ಗಳಿಕೆಗಿಂತಲೂ ಟೆಸ್ಟ್ ಆಟದ ಮನಮೋಹಕ ಶೈಲಿ ಅವರಿಗೆ ಒಬ್ಬ ಪರಿಪೂರ್ಣ ಟೆಸ್ಟ್ ಆಟಗಾರ ಎಂಬ ಗೌರವವನ್ನು ತಂದುಕೊಟ್ಟಿತ್ತು. ರಾಹುಲ್ ದ್ರಾವಿಡ್ ಬಳಿಕ ಈ ಹಿರಿಮೆಗೆ ಪೂಜಾರ ಪಾತ್ರರಾಗಿದ್ದರು. ಅವರನ್ನು ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿ ಎಂದೇ ಅರಿಯಲಾಗುತ್ತಿತ್ತು. 103 ಟೆಸ್ಟ್ ಪಂದ್ಯಗಳಲ್ಲಿ ಅವರು 19 ಶತಕಗಳನ್ನು ಬಾರಿಸಿದ್ದಾರೆ.
ಕೊನೆಯ ಕೆಲವು ಪಂದ್ಯಗಳಲ್ಲಿ ಅವರ ರನ್ ಗಳಿಕೆ ಕುಸಿದಿದ್ದರೂ ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್‌ಗೆ ನೀಡಿದ ಕೊಡುಗೆ ಮಾತ್ರ ದೊಡ್ಡದು. 20-20ಯಂಥ ಹೊಡಿಬಡಿ ಕ್ರಿಕೆಟ್ ಯುಗದಲ್ಲಿ ಟೆಸ್ಟ್‌ನ ಪಾವಿತ್ರ್ಯವನ್ನು ಉಳಿಕೊಂಡಿದ್ದ ಆಟಗಾರ ಅವರು. ಟೆಸ್ಟ್‌ನ ಎಲ್ಲ ತಾಂತ್ರಕಿತೆ ಮತ್ತು ಕೌಶಲಗಳನ್ನು ಮೈಗೋಡಿಸಿಕೊಂಡಿದ್ದ ಪೂಜಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದರು.