ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭಯಾನಕ ಘಟನೆ ನಡೆದಿದ್ದು, ಭರತ್ ಮತ್ತು ಈತನ ಗ್ಯಾಂಗ್ ಖೈದಿ ಅನಿಲ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಖೈದಿ ಅನಿಲ್ ಕುಮಾರ್ ವಿಚಾರಣೆಯ ಸಂಬಂಧ ವಿಡಿಯೋ ಕಾನ್ಫರೆನ್ಸ್ ಕೊಠಡಿಗೆ ತೆರಳುತ್ತಿದ್ದ ಸಂದರ್ಭ, ಭರತ್ ನೇತೃತ್ವದ ಗ್ಯಾಂಗ್ ಕ್ವಾರಂಟೈನ್ ಸೆಕ್ಷನ್‌ನ ಬ್ಯಾರಕ್–2ರ ಹಿಂಭಾಗದ ಕೊಠಡಿ ಸಂಖ್ಯೆ 6ರ ಬಳಿ ಅವರನ್ನು ನೋಡಿ, “ನಮ್ಮನ್ನು ನೋಡಿ ಉಗಿತಿಯಾ?” ಎಂದು ಕೇಳುತ್ತಲೇ ಮಾರಕ ಆಯುಧಗಳಿಂದ ಹಲ್ಲೆ ನಡೆಸಿದೆ. ಈ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಅನಿಲ್ ಕುಮಾರ್ ಅವರನ್ನು ತಕ್ಷಣವೇ ಪರಪ್ಪನ ಅಗ್ರಹಾರ ಜೈಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಭರತ್ ಸೇರಿದಂತೆ ಎಂಟು ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 118(1), 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.
ಅನಿಲ್ ಕುಮಾರ್ 2023ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದಾರೆ. ಇನ್ನು ಭರತ್ ಮತ್ತು ಈತನ ಸಹಚರರು 2025ರಲ್ಲಿ ನಡೆದ ಮತ್ತೊಂದು ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿಗೆ ಬಂದಿದ್ದರು. ಈ ಹಿನ್ನಲೆಯಲ್ಲಿ ಇಬ್ಬರ ನಡುವೆ ಹಿಂದಿನಿಂದಲೂ ವೈಮನಸ್ಯ ಇದ್ದಿದ್ದು, ಇದೇ ಹಲ್ಲೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ತೀವ್ರತೆ ಮತ್ತು ಜೈಲು ವ್ಯವಸ್ಥೆಯ ಭದ್ರತೆ ಕುರಿತು ಇದೀಗ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜೈಲು ಇಲಾಖೆ ಹಾಗೂ ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.