ಬೆಂಗಳೂರು: ಶ್ವಾನ ಎನ್ನುವುದು ವಾಸನಾ ಶಕ್ತಿಗೆ ಪ್ರಸಿದ್ಧವಾದ ಪ್ರಾಣಿ. ಇದು ಬಹುಪಾಲು ಸುಗಂಧಗಳು ಅಥವಾ ದುರ್ಗಂಧಗಳನ್ನು ಮನುಷ್ಯನಿಗಿಂತ ಲಕ್ಷಾಂತರ ಪಟ್ಟು ವೇಗವಾಗಿ ಮತ್ತು ಸೂಕ್ಷ್ಮವಾಗಿ ಗ್ರಹಿಸಬಲ್ಲದು. ಇಲ್ಲಿಯವರೆಗೆ ಅಪರಾಧ ಪತ್ತೆ, ಬಾಂಬ್ ಶೋಧನೆ, ಮಾದಕವಸ್ತು ಪತ್ತೆ, ಅಥವಾ ಶವ ಪತ್ತೆಗೆ ಶ್ವಾನಬಳಕೆ ಸೀಮಿತವಾಗಿತ್ತು. ಆದರೆ ಈಗ, ಬೆಂಗಳೂರಿನ ಸ್ಟಾರ್ಟ್‌ಅಪ್ “ಡಾಗ್ನಾಸಿಸ್” ನಾಯಿಯ ಈ ಶಕ್ತಿಯನ್ನು ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆ ಪತ್ತೆಗೆ ಬಳಸುತ್ತಿದೆ. ಈ ಮೂಲಕ ವೈಜ್ಞಾನಿಕ ಲೋಕದಲ್ಲಿ ಮತ್ತೊಂದು ಅವಿಷ್ಕಾರವಾಗಿದೆ.
ಡಾಗ್ನಾಸಿಸ್ ಪರೀಕ್ಷೆ ಹೇಗೆ ನಡೆಯುತ್ತದೆ? :
ರೋಗ ಪತ್ತೆಗಾಗಿ, ಪರೀಕ್ಷೆಗೆ ಒಳಪಡುವ ವ್ಯಕ್ತಿಗೆ ಸುಮಾರು 10 ನಿಮಿಷಗಳ ಕಾಲ ಮಾಸ್ಕ್ ಹಾಕಲಾಗುತ್ತದೆ. ಈ ಅವಧಿಯಲ್ಲಿ ಆ ವ್ಯಕ್ತಿಯ ಉಸಿರಾಟದ ಮೂಲಕ ಹೊರಬರುವ ರಾಸಾಯನಿಕ ಅಂಶಗಳು ಮಾಸ್ಕ್‌ಗೆ ಅಂಟಿಕೊಳ್ಳುತ್ತವೆ. ನಂತರ ಈ ಮಾಸ್ಕ್ ಡಾಗ್ನಾಸಿಸ್ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಅಲ್ಲಿರುವ ವಿಶಿಷ್ಟ ತರಬೇತಿ ಪಡೆದ ನಾಯಿಗಳಿಗೆ ಈ ಮಾಸ್ಕ್ ಸ್ಮೆಲ್ ಮಾಡಿಸಲಾಗುತ್ತದೆ. ನಾಯಿಗೆ EEG ಹೆಡ್‌ಸೆಟ್ ಹಾಕಲಾಗಿದ್ದು, ನಾಯಿಯ ಮೆದುಳಿನಲ್ಲಿ ಆಗುವ ನ್ಯೂರಲ್ ಪ್ರತಿಕ್ರಿಯೆಗಳನ್ನು ಆ ಸಾಧನ ಸಂಗ್ರಹಿಸುತ್ತದೆ. ಈ ಸಿಗ್ನಲ್‌ಗಳನ್ನು “ಡಾಗ್‌ಒಎಸ್” ಎಂಬ ಎಐ ತಂತ್ರಾಂಶ ವಿಶ್ಲೇಷಿಸಿ, ಮಾಸ್ಕ್‌ನಲ್ಲಿ ಕ್ಯಾನ್ಸರ್ ಅಥವಾ ಇತರ ರೋಗಕಾರಕ ಅಣುಗಳಿವೆ ಎಂಬುದನ್ನು ನಿರ್ಧರಿಸುತ್ತದೆ.
98% ನಿಖರತೆ – ವೈಜ್ಞಾನಿಕ ಪ್ರಗತಿಯ ಗುರಿ :
ಡಾಗ್ನಾಸಿಸ್ ನ ತಂತ್ರಜ್ಞಾನ ಶೇ.98 ರಷ್ಟು ನಿಖರತೆಗೆ 10ಕ್ಕೂ ಹೆಚ್ಚು ವಿಧದ ಕ್ಯಾನ್ಸರ್ ಪತ್ತೆ ಮಾಡಬಲ್ಲದು ಎಂದು ಸಂಸ್ಥೆ ಹೇಳುತ್ತದೆ. ಇದು ಕೋವಿಡ್, ಕ್ಷಯ ರೋಗ ಸೇರಿದಂತೆ ಇತರ ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಗುರುತಿಗೂ ಬಳಸಬಹುದಾಗಿದೆ.
ಆವಿಷ್ಕಾರಶೀಲ ತಂತ್ರಜ್ಞಾನ ಹಿನ್ನೆಲೆ :
ಕಾಗ್ನೈಟಿವ್ ಸೈಂಟಿಸ್ಟ್ ಆದ ಆಕಾಶ್ ಕುಲಗೋಡ್ ಹಾಗೂ ಮಾಜಿ ಇಸ್ರೇಲೀ ಕಮಾಂಡರ್ ಇಟಮರ್ ಬಿಟನ್ ಎನ್ನುವವರು ಡಾಗ್ನಾಸಿಸ್ ಕಂಪನಿಯ ಸ್ಥಾಪಕರಾಗಿದ್ದಾರೆ. ಇವರ ಸ್ಟಾರ್ಟಪ್ನಲ್ಲಿ ನ್ಯೂರೋಸೈನ್ಸ್, ಎಂಜಿನಿಯರಿಂಗ್, ಕ್ಲಿನಿಕಲ್ ಆಪರೇಷನ್ಸ್, ಸಾಫ್ಟ್ವೇರ್ ಕ್ಷೇತ್ರಗಳ ಹತ್ತಾರು ಇನ್ನೋವೇಟರ್ಗಳ ತಂಡ ಕೆಲಸ ಮಾಡುತ್ತಿದೆ
ಶ್ವಾನ ಶಕ್ತಿಯಿಂದ ಮಾನವ ಆರೋಗ್ಯಕ್ಕಾಗಿ ಹೊಸ ಯುಗದ ಪ್ರಾರಂಭ:
ಈ ಆವಿಷ್ಕಾರ ಆರೋಗ್ಯ ತಪಾಸಣೆಯ ಹಿನ್ನಲೆಯಲ್ಲಿ ನಿಸರ್ಗ ಮತ್ತು ತಂತ್ರಜ್ಞಾನ ಒಂದೇ ವೇದಿಕೆಯಲ್ಲಿ ಸೇರಿದ ಅತ್ಯುತ್ತಮ ಉದಾಹರಣೆ. ನಾಯಿ – ಮನುಷ್ಯನ ಗೆಳೆಯ ಮಾತ್ರವಲ್ಲ, ಈಗ ಅವನ ವೈದ್ಯನೂ ಹೌದು ಎಂಬ ಮಾತು ಅತಿ ದೂರದಲ್ಲಿಲ್ಲವೆಂದು ಈ ನವೀನ ಪ್ರಯೋಗ ತೋರಿಸುತ್ತಿದೆ.