ಮೊದಲ ಬಾರಿಗೆ ಬ್ಯಾಂಕ್ ಸಾಲ ಪಡೆಯುವವರಿಗೆ CIBIL ಸ್ಕೋರ್ ಇಲ್ಲದ ಕಾರಣಕ್ಕೆ ಬ್ಯಾಂಕ್ ಗಳಲ್ಲಿ ಸಾಲ ನೀಡಲಾಗುತ್ತಿರಲಿಲ್ಲ. ಆದ್ರೆ ಇನ್ನುಮುಂದೆ CIBIL ಸ್ಕೋರ್ ಕಾರಣ ನೀಡದೆ ಸಾಲ ನಿರಾಕರಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಹೊಸ ಸಾಲ ಪಡೆಯುವವರ ಸಾಲ ಅರ್ಜಿಗಳನ್ನು ಅವರಿಗೆ ಹಿಂದಿನ ಸಾಲ ಇತಿಹಾಸವಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳು ಮತ್ತು ಕ್ರೆಡಿಟ್ ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ಹೇಳಿದ್ದಾರೆ.
ಅಲ್ಲದೆ ಕ್ರೆಡಿಟ್ ಸಂಸ್ಥೆಗಳಿಗೆ ಉತ್ತಮ ಅಭ್ಯಾಸಗಳ ಭಾಗವಾಗಿ, ಮೊದಲ ಬಾರಿಗೆ ಸಾಲ ಪಡೆಯುವವರ ಸಾಲ ಅರ್ಜಿಗಳನ್ನು ಅವರಿಗೆ ಕ್ರೆಡಿಟ್ ಇತಿಹಾಸವಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಬಾರದು ಎಂದು RBI ಸಲಹೆ ನೀಡಿದೆ. ಆರ್‌ಬಿಐ ಸಾಲಗಾರರಿಗೆ ಯಾವುದೇ ಕನಿಷ್ಠ ಕ್ರೆಡಿಟ್ ಸ್ಕೋರ್ ಅನ್ನು ನಿಗದಿಪಡಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
CIBIL ಸ್ಕೋರ್ ಎಂದರೇನು?
CIBIL ಸ್ಕೋರ್ ಎನ್ನುವುದು 300 ರಿಂದ 900 ರ ನಡುವಿನ ಮೂರು-ಅಂಕಿಯ ಸಂಖ್ಯೆಯಾಗಿದ್ದು, ಇದು ಮರುಪಾವತಿ ಇತಿಹಾಸ, ಸಕ್ರಿಯ ಸಾಲಗಳು ಮತ್ತು ಆರ್ಥಿಕ ಶಿಸ್ತಿನ ಆಧಾರದ ಮೇಲೆ ವ್ಯಕ್ತಿಯ ಸಾಲ ಅರ್ಹತೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಕ್ರೆಡಿಟ್ ಮಾಹಿತಿ ಬ್ಯೂರೋ (ಭಾರತ) ಲಿಮಿಟೆಡ್ (CIBIL) ನೀಡುತ್ತದೆ ಮತ್ತು ಸಾಲದ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಬ್ಯಾಂಕುಗಳು ಇದನ್ನು ವ್ಯಾಪಕವಾಗಿ ಬಳಸುತ್ತವೆ.