ನವದೆಹಲಿ: ತನ್ನ ಪತಿ ನಪುಂಸಕ. ಆತನಿಂದ ವಿಚ್ಛೇದನ ಮತ್ತು 90 ಲಕ್ಷ ರೂ. ಜೀವನಾಂಶ ಬೇಕೆಂದು ಮಹಿಳೆಯೊಬ್ಬರು ತೆಲಂಗಾಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಆದರೆ, ಪತಿಯ ನಪುಂಸಕತೆ ಅಥವಾ ಅವರು ಹೆಂಡತಿಗೆ ವಂಚನೆ ಮಾಡಿದ್ದಾರೆ ಎಂಬ ಆ ಮಹಿಳೆಯ ವಾದವನ್ನು ಪುಷ್ಟೀಕರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಆ ಮಹಿಳೆಯ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ತಿರಸ್ಕರಿಸಿದೆ. ತನ್ನ ಪತಿ ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಲೈಂಗಿಕ ಸಂಪರ್ಕಕ್ಕೆ ಅಸಮರ್ಥರಾಗಿದ್ದಾರೆ ಎಂಬ ಕಾರಣಕ್ಕೆ ಮಹಿಳೆ ವಿಚ್ಛೇದನ ಕೋರಿದ್ದರು.
ಜತೆಗೆ 90 ಲಕ್ಷ ರೂ. ಶಾಶ್ವತ ಜೀವನಾಂಶದ ಬೇಡಿಕೆ ಇಟ್ಟಿದ್ದರು. ಮದುವೆಗೂ ಮೊದಲು ತನ್ನ ನಪುಂಸಕತೆಯ ಬಗ್ಗೆ ತಿಳಿಸದೆ ಅವರು ವಿವಾಹ ವಂಚನೆ ಮಾಡಿದ್ದಾರೆ ಎಂದು ಮಹಿಳೆ ವಾದಿಸಿದ್ದರು. ಆದರೆ, ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಬಿ.ಆರ್. ಮಧುಸೂಧನ್ ರಾವ್ ಅವರ ಹೈಕೋರ್ಟ್ ಪೀಠವು ಆಕೆಯ ಮೇಲ್ಮನವಿಯನ್ನು ವಜಾಗೊಳಿಸಿತು. ಅಲ್ಲದೆ, ಆಕೆಯ ಮನವಿಯನ್ನು ತಿರಸ್ಕರಿಸುವ ಕುಟುಂಬ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿಯಿತು. ಈ ದಂಪತಿ ಡಿಸೆಂಬರ್ 2013ರಲ್ಲಿ ವಿವಾಹವಾಗಿದ್ದರು. ಆದರೆ, ಮದುವೆಯಾದಾಗಿನಿಂದ ತಾವಿಬ್ಬರೂ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಪತ್ನಿ ತಮ್ಮ ಎರಡು ಹನಿಮೂನ್ಗಳನ್ನು ಸಹ ಉಲ್ಲೇಖಿಸಿದ್ದಾರೆ. ಒಂದು 2013ರಲ್ಲಿ ಕೇರಳದಲ್ಲಿ ಮತ್ತು ಇನ್ನೊಂದು 2014ರಲ್ಲಿ ಕಾಶ್ಮೀರದಲ್ಲಿ ನಡೆದಿತ್ತು. ಆದರೆ, ಆಕೆಯ ಪತಿಗೆ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ. ಇದರಿಂದ ತನಗೆ ವಂಚನೆಯಾಗಿದೆ ಎಂದು ಆಕೆ ಕೋರ್ಟ್ ಮೆಟ್ಟಿಲೇರಿದ್ದಳು. ಸುಳ್ಳು ಹೇಳಿ ತನ್ನನ್ನು ಮದುವೆಯಾಗಿದ್ದಾರೆ ಎಂದು ಆಕೆ ಆರೋಪಿಸಿದ್ದರು. ತನ್ನ ಪತಿ ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿದ್ದಾರೆ. ಇದು ನಿಮಿರುವಿಕೆಯ ಸಮಸ್ಯೆಗೆ ಕಾರಣವಾಗುತ್ತದೆ ಎಂಬ ಅಂಶವನ್ನು ಅವರು ಮುಚ್ಚಿಟ್ಟಿದ್ದರು. ಇದು ಹಿಂದೂ ವಿವಾಹ ಕಾಯ್ದೆ, 1955 ರ ಅಡಿಯಲ್ಲಿ ಕ್ರೌರ್ಯಕ್ಕೆ ಸಮನಾಗಿರುತ್ತದೆ ಎಂದು ಆ ಮಹಿಳೆ ಆರೋಪಿಸಿದ್ದರು.
ಪತಿ ಹೆಂಡತಿಯ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದರು. ತಮಗೆ ಸಣ್ಣಪುಟ್ಟ ಲೈಂಗಿಕ ಸಮಸ್ಯೆ ಇದ್ದರೂ ಅದಕ್ಕೆ ಈಗಾಗಲೇ ಚಿಕಿತ್ಸೆ ಪಡೆದಿದ್ದೇನೆ ಎಂದು ಹೇಳಿಕೊಂಡರು. ಎರಡೂ ಹನಿಮೂನ್ ಸೇರಿದಂತೆ ಹಲವು ಸಂದರ್ಭಗಳಲ್ಲಿ ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಮದುವೆಯಾದ 5 ವರ್ಷಗಳ ನಂತರ ತನ್ನ ಪತಿ ಲೈಂಗಿಕವಾಗಿ ದುರ್ಬಲ ಎಂದು ಹೆಂಡತಿ ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.