ವಾಷಿಂಗ್ಟನ್ : ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷವು ‘ಪರಮಾಣು ಯುದ್ಧ’ವಾಗಿ ಸಂಭವಿಸುವ ಅಪಾಯವಿತ್ತು. ಕದನ ವಿರಾಮಕ್ಕೆ ಒಪ್ಪದಿದ್ದರೆ ಎಲ್ಲ ರೀತಿಯ ವ್ಯಾಪಾರ ಒಪ್ಪಂದಗಳನ್ನು ನಿರಾಕರಿಸುವುದಾಗಿ ಬೆದರಿಸುವ ಮೂಲಕ ಅದನ್ನು ತಡೆದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಿಳಿಸಿದ್ದಾರೆ.
ಶ್ವೇತಭವನದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೇ. ನಿಮ್ಮ ಹಾಗೂ ಪಾಕಿಸ್ತಾನ ನಡುವೆ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದೆ, ಎರಡೂ ದೇಶಗಳ ನಡುವೆ ಬಹಳ ವರ್ಷಗಳಿಂದ ದ್ವೇಷವಿದೆ’ ಎಂದಿದ್ದಾರೆ.
‘ಭಾರತ, ಪಾಕಿಸ್ತಾನ ನಡುವಿನ ಸಂಘರ್ಷವು ಪರಮಾಣು ಯುದ್ಧದಲ್ಲಿ ಅಂತ್ಯವಾಗಲಿದ್ದೀರಿ. ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಯಸುವುದಿಲ್ಲ. ಇಲ್ಲವೇ, ನಿಮ್ಮ ತಲೆ ತಿರುಗುವಂತೆ ಹೆಚ್ಚುವರಿ ಸುಂಕ ವಿಧಿಸುತ್ತೇವೆ ಎಂದು ಹೇಳಿದ್ದೆ. ಐದು ಗಂಟೆಯಾಗುವುದರೊಳಗೆ ಸಂಘರ್ಷ ನಿಂತಿತ್ತು. ಬಹುಶಃ ಅದು ಮತ್ತೆ ಆರಂಭವಾಗಬಹುದು. ಹಾಗೇನಾದರೆ ಅದನ್ನು ನಿಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.