ಕಾಸರಗೋಡು: ಒಂದೇ ಕುಟುಂಬದ ನಾಲ್ವರು ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಈ ಪೈಕಿ ಮೂವರು ಮೃತಪಟ್ಟು ಓರ್ವ ಚಿಂತಾಜನಕ ಸ್ಥಿತಿಯಲ್ಲಿ ದಾಖಲಾದ ಘಟನೆ ಕಾಸರಗೋಡು ಸಮೀಪ ಇಂದು ಮುಂಜಾನೆ ಸಂಭವಿಸಿದೆ.
ಕಾಸರಗೋಡಿನ ಅಂಬಲತ್ತರ ಪಾರಕ್ಕಾಲಯಿಯ ಗೋಪಿ (60), ಪತ್ನಿ ಇಂದಿರಾ (57) ಮತ್ತು ಪುತ್ರ ರಂಜೇಶ್ (34) ಮೃತಪಟ್ಟವರು. ಗಂಭೀರ ಸ್ಥಿತಿಯಲ್ಲಿದ್ದ ಇನ್ನೋರ್ವ ಪುತ್ರ ರಾಕೇಶ್ನನ್ನು ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ನಾಲ್ವರನ್ನು ಆಸ್ಪತ್ರೆಗೆ ತಲಪಿದರೂ ಮೂವರು ಮೃತಪಟ್ಟರು ಎಂದು ತಿಳಿದು ಬಂದಿದೆ. ರಾಕೇಶ್ ಸ್ಥಿತಿ ಕೂಡ ಚಿಂತಾಜನಕವಿದೆ ಎನ್ನಲಾಗಿದೆ.
ಆರ್ಥಿಕ ಮುಗ್ಗಟ್ಟು ಘಟನೆಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ಮಾಹಿತಿ ತಿಳಿಸಿದೆ. ನಿನ್ನೆ ಈ ಕುಟುಂಬ ದೇವಸ್ಥಾನಕ್ಕೆ ಹೋಗಿತ್ತು ಹಾಗೂ ಹತ್ತಿರವಿರುವ ಕೆಲವು ಬಂಧುಗಳ ಮನೆಗೂ ಭೇಟಿ ನೀಡಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಗುರುವಾರ ನಸುಕಿನ 3 ಗಂಟೆ ಸುಮಾರಿಗೆ ಗೋಪಿಯವರ ಸಹೋದರನ ಹೆಂಡತಿಯ ಮೊಬೈಲ್ಗೆ ಕರೆ ಮಾಡಿ ನಾವು ಅಸ್ವಸ್ಥರಾಗಿದ್ದೇವೆ, ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿದ್ದಾರೆ. ಈ ಕರೆಯನ್ನು ರಾಕೇಶ್ ಮಾಡಿರಬೇಕು ಎನ್ನಲಾಗಿದೆ.
ಸಂಬಂಧಿಕರು ಮತ್ತು ನೆರೆಹೊರೆಯವರು ಬರುವಷ್ಟರಲ್ಲಿ ನಾಲ್ಕು ಮಂದಿ ಆ್ಯಸಿಡ್ ಸೇವಿಸಿ ಆಗಿತ್ತು. ಮೂವರು ಅದಾಗಲೇ ಮೃತಪಟ್ಟಿದ್ದರು, ರಾಕೇಶ್ ನರಳುತ್ತಿದ್ದ. ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ಯಲಾಯಿತು.
ರಂಜೇಶ್ ಮತ್ತು ರಾಕೇಶ್ ವಿದೇಶದಲ್ಲಿ ನೌಕರಿಯಲ್ಲಿದ್ದರು. ಎರಡು ವರ್ಷದ ಹಿಂದೆ ಊರಿಗೆ ಬಂದು ಮನೆಮನೆಗೆ ಕಿರಾಣಿ ಸಾಮಗ್ರಿಗಳನ್ನು ತಲುಪಿಸುವ ವ್ಯವಹಾರ ಶುರು ಮಾಡಿದ್ದರು. ಆದರೆರ ಈ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು ಎನ್ನಲಾಗಿದೆ.