ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪದ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು. ಅನಾಮಿಕ ದೂರುದಾರನಾಗಿ ಗುರುತಿಸಿಕೊಂಡಿದ್ದ ಚಿನ್ನಯ್ಯ ಎಂಬ ವ್ಯಕ್ತಿಯನ್ನೇ ವಿಶೇಷ ತನಿಖಾ ದಳ (SIT) ಅಧಿಕಾರಿಗಳು A1 ಆರೋಪಿ ಯನ್ನಾಗಿ ಮಾಡಿ, ಹತ್ತು ಹೊಸ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಎಸ್ಐಟಿ ಮೂಲಗಳಿಂದ ತಿಳಿದು ಬಂದಿದೆ.
ಈತ ಬೆಳ್ತಂಗಡಿ ನ್ಯಾಯಾಲಯಕ್ಕೆ ತಂದಿರುವ ತಲೆಬುರುಡೆಯ ವಿಚಾರದಲ್ಲಿ ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿದೆ. ತಲೆಬುರುಡೆಯನ್ನು ತೆಗೆದ ಜಾಗದ ಮಹಜರು ಪ್ರಕ್ರಿಯೆ ಇನ್ನೂ ಮಾಡಲು ಸಾಧ್ಯವಾಗಿಲ್ಲ ಈತ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಇಡೀ ವ್ಯವಸ್ಥೆಯನ್ನು ಗೊಂದಲಕ್ಕೆ ಸಿಲುಕಿಸಿದ್ದ. ಈತ ನ್ಯಾಯಾಧೀಶರ ಮುಂದೆ 164 ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿದ್ದು ಈ ಹೇಳಿಕೆಯ ವೇಳೆ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಆತ ಇದೀಗ ಎಸ್.ಐ.ಟಿಗೆ ಹೇಳಿಕೆ ನೀಡಿದ್ದಾನೆ ಅಲ್ಲದೆ ಈತನ ಹೊಸ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಲಾಗಿದ್ದು ಅದರ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.
ಇದೀಗ ಪ್ರಕರಣದಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣ 39/25ರಲ್ಲಿ ಹೊಸದಾಗಿ ಹಲವು ಸೆಕ್ಷನ್ ಗಳನ್ನು ಸೇರಿಸಿದ್ದಾರೆ. ಅದಲ್ಲದೆ ಕೋರ್ಟ್ ಗೆ ಎಸ್.ಐ.ಟಿ ಅಧಿಕಾರಿಗಳು 39/2025 ಪ್ರಕರಣದ ಎಲ್ಲಾ ಮಾಹಿತಿ ಗೌಪ್ಯವಾಗಿಡಲು ಮನವಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.ಲಭ್ಯ ಮಾಹಿತಿಗಳಂತೆ ಇದೀಗ ಸಾಕ್ಷಿ ದೂರುದಾರನಾಗಿ ಬಂದ ಚೆನ್ನಯ್ಯ ವಿರುದ್ದ
BNS 336 (ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರನ್ನು ಭಯಭೀತಗೊಳಿಸುವುದು), 230 (ಸಾರ್ವಜನಿಕ ಸೇವಕರಿಗೆ ತಪ್ಪು ಮಾಹಿತಿ ನೀಡುವುದು), 231 (ನ್ಯಾಯಾಲಯದ ಕಾರ್ಯಕ್ಕೆ ಅಡ್ಡಿಪಡಿಸುವುದು), 229 (ಸುಳ್ಳು ಸಾಕ್ಷ್ಯ ನೀಡುವುದು), 227 (ಸಾರ್ವಜನಿಕ ಶಾಂತಿ ಕದಡುವುದು), 228 (ನ್ಯಾಯಾಲಯಕ್ಕೆ ಅಪಮಾನ ಮಾಡುವುದು), 240 (ತಪ್ಪು ಮಾಹಿತಿ ನೀಡಿ ತನಿಖೆ ದಿಕ್ಕು ತಪ್ಪಿಸುವುದು), 236 (ಪಿತೂರಿ), 233 (ತಪ್ಪಾಗಿ ಜನರನ್ನು ಪ್ರೇರೇಪಿಸುವುದು) ಮತ್ತು 248 (ಸುಳ್ಳು ದೂರು ನೀಡಿ ಸಮಯ ಹಾಳುಮಾಡುವುದು) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ದೂರುದಾರನಾಗಿದ್ದ ಚಿನ್ನಯ್ಯನನ್ನೇ ಈಗ A1 ಆರೋಪಿಯನ್ನಾಗಿ ಮಾಡಲಾಗಿರುವುದಾಗಿ ತಿಳಿದು ಬಂದಿದೆ. ಇದೀಗ ಮಹೇಶ್ ಶೆಟ್ಟಿ ಮನೆಯಲ್ಲಿದ್ದ ಈತನಿಗೆ ಸೇರಿದ ವಸ್ತುಗಳನ್ನು ವಶಪಡಿಸಿಕೊಂಡು ಮಹಜರು ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.