ಡೆಹ್ರಾಡೂನ್ : ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿ, ಜಿಲ್ಲೆಗಳಲ್ಲಿ ಭಾರೀ ಮೇಘಸ್ಫೋಟ ಸಂಭವಿಸಿದೆ. ಪರಿಣಾಮ ಹಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಮೇಘಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ದೇವಲ್‌ನ ಮೊಪಾಟಾ ಪ್ರದೇಶದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಇನ್ನೂ 15ಕ್ಕೂ ಹೆಚ್ಚು ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರುದ್ರಪ್ರಯಾಗ ಜಿಲ್ಲೆಯಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮದಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಹನುಮಾನ್ ದೇವಾಲಯ ಮುಳುಗಡೆಯಾಗಿದೆ.
ಶ್ರೀನಗರ ಮತ್ತು ರುದ್ರಪ್ರಯಾಗ ನಡುವಿನ ಬದರಿನಾಥ ಹೆದ್ದಾರಿ ಮುಳುಗಡೆಯಾದ ಹಿನ್ನೆಲೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಯಾತ್ರಿಕರನ್ನು ಪರ್ಯಾಯ ಮಾರ್ಗಗಳ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಅಲ್ಲಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇನ್ನೂ ಕೇದಾರನಾಥ ಕಣಿವೆಯ ಲಾವಾರಾ ಗ್ರಾಮದಲ್ಲಿಯೂ ಭೀಕರ ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ ರಸ್ತೆಯ ಸೇತುವೆಯೊಂದು ಕೊಚ್ಚಿಹೋಗಿದ್ದು, ಚೆನಾಗಡ್‌ನಲ್ಲಿಯೂ ಗಂಭೀರ ಪರಿಸ್ಥಿತಿ ಉಂಟಾಗಿದೆ.
ಭಾರೀ ಮಳೆಯ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ರುದ್ರಪ್ರಯಾಗ, ಬಾಗೇಶ್ವರ, ಚಮೋಲಿ, ಹರಿದ್ವಾರ ಮತ್ತು ಪಿಥೋರಗಢ ಜಿಲ್ಲೆಗಳಾದ್ಯಂತ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ.