ಚಿತ್ರದುರ್ಗ : ಕರ್ನಾಟಕದಲ್ಲಿನ 59 ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ, ಶೇ 1%ರಷ್ಟು ಪಾಲನ್ನು ನೀಡದಿದ್ದರೆ ವಿಧಾನಸೌಧ ಮತ್ತು ಮುಖ್ಯಮಂತ್ರಿಗಳ ಮನೆಯನ್ನು ಮುತ್ತಿಗೆ ಹಾಕಲಾಗುವುದು ಎಂದು ಪರಿಶಿಷ್ಟ ಜಾತಿ 59, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಪ್ರತಾಪ್ ಜೋಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಯವರ ಕಛೇರಿಯವರೆಗೆ ಅಲೆಮಾರಿ ಬಂಧುಗಳು ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಪ್ರತಿ ಜಿಲ್ಲೆಗಳಲ್ಲಿಯೂ ಸಹ ಇದೇ ರೀತಿಯಲ್ಲಿ ಸಂಗ್ರಹಿಸಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಅಲ್ಲಿಯವರೆಗೂ ಸಹ ಮುಖ್ಯಮಂತ್ರಿಗಳು ಹೋಗದೇ ನಮಗೆ ನ್ಯಾಯ ದೊರಕಿಸಿಕೊಡಬೇಕು ಆಗ್ರಹಿಸಿದರು.
ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಅಲೆಮಾರಿಗಳಿಗೆ ಶೇ 1ರಷ್ಟು ಒಳ ಮೀಸಲಾತಿ ಜಾರಿ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುವ ಸಲುವಾಗಿ ಓನಕೆ ಒಬವ್ವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಆಹೋ ರಾತ್ರಿ ಪ್ರತಿಭಟನೆ ಮತ್ತು ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಸರಕಾರವು ಈಗಾಗಲೆ ಮೀಸಲಾತಿಯ ಒಳವರ್ಗೀಕರಣಕ್ಕೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸಿದೆ. ಆದರೆ ಕರ್ನಾಟಕದ ಸರಕಾರದ ಈ ಆದೇಶವು ಸರ್ವೋಚ್ಚ ನ್ಯಾಯಾಲಯವು ಮೀಸಲಾತಿಯ ಒಳವರ್ಗೀಕರಣದ ಕುರಿತು ನೀಡಿದ ಮಹತ್ವದ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಕಳೆದ 75 ವರ್ಷಗಳಲ್ಲಿ ಮೀಸಲಾತಿಯ ಮೂಲಕ ಸೂಕ್ತ ಪ್ರಾತಿನಿಧ್ಯ ಪಡೆಯದ ಅಲೆಮಾರಿ ಸಮುದಾಯಗಳಲ್ಲಿ ಈ ತೀರ್ಪು ಹೊಸ ಭರವಸೆಯನ್ನು ಮೂಡಿಸಿತ್ತು. ಸದರಿ ತೀರ್ಪನ್ನು ಆಧರಿಸಿ ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿಗೆ ತರುವ ಸಲುವಾಗಿ ಕರ್ನಾಟಕದ ಘನಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗವನ್ನೂ ನೇಮಿಸಲಾಗಿತ್ತು.
ಈ ಆಯೋಗವು 59 ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಇವುಗಳ ಜೊತೆಗೆ ಇನ್ನೂ ಹತ್ತು ಸಮುದಾಯಗಳನ್ನು ಸೇರ್ಪಡೆ ಮಾಡಿ ಶೇ 1% ರಷ್ಟು ಪ್ರಮಾಣದ ಮೀಸಲಾತಿಯನ್ನು ನಿಗದಿ ಮಾಡಿತ್ತು. ಆದರೆ ಅವಿಜ್ಞಾನಿಕ ಕ್ಯಾಬಿನೆಟ್ ನಿರ್ಣಯವು ಅಲೆಮಾರಿ ಸಮುದಾಯಗಳನ್ನು ಪ್ರಭಾವಿ ಜಾತಿ ಸಮುದಾಯಗಳ ಗುಂಪಿಗೆ ಸೇರಿಸಿಬಿಟ್ಟಿದೆ. ಈಗ ಅಲೆಮಾರಿಗಳು ಪ್ರಬಲ ಜಾತಿಗಳ ವಿರುದ್ಧ ಮತ ಲಪಾಟಿಸಲು ನಮ್ಮ ವಿರುದ್ಧ ವೈಶಮ್ಯ ಹುಟ್ಟಿಸುವಂತಹ ತಂತ್ರ ಮುಖ್ಯಮಂತ್ರಿಗಳಾಗಿದೆ. ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯ ನೀಡುತ್ತೇವೆಂದು ಮತ್ತು ಸಮಾಜವಾದಿ ಆಶಯಗಳನ್ನು ಸದಾ ಪ್ರತಿಪಾದಿಸುತ್ತೇವೆ ಎಂಬುವಂತಹ ನಮ್ಮ ಅಲೆಮಾರಿ ಬಂಧುಗಳಿಗೆ ಹೆಗಲಿಗೆ ಹೆಗಲಾಗಿರುವ ಸಮುದಾಯಗಳ ಮಧ್ಯೆ ವೈಶಮ್ಯ ಹುಟ್ಟಿಸುವ ಜೊತೆ ಜೊತೆಯಲ್ಲಿಯೇ ನಮ್ಮ ಅಲೆಮಾರಿ ಸಮುದಾಯವನ್ನು ಕೈಬಿಡುವಂತಹ ನಿಲ್ಲಿನಲ್ಲಿ ರಾಜಕೀಯ ತಂತ್ರ ಮಾಡಿರುತ್ತಾರೆ. ಪ್ರಭಾವಿ ರಾಜಕಾರಣಿಗಳು ಕಾಲಾವಧಿಯಲ್ಲಿ ಅಲೆಮಾರಿಗಳಂತಹ ತಬ್ಬಲಿ ಸಮುದಾಯಗಳಿಗೆ ನ್ಯಾಯ ಸಿಗುವ ಭರವಸೆ ಇತ್ತು. ಆದರೆ ದಿ: 25.08.2025ರಂದು ಹೊರಡಿಸಿದ ಸರಕಾರದ ಆದೇಶವು ಈ 59 ಅಲೆಮಾರಿ ಸಮುದಾಯಗಳನ್ನು ಶಾಶ್ವತವಾಗಿ ಮೂಲೆಗುಂಪಾಗಿಸಲಿದೆ ಎಂದು ದೂರಿದರು.
ಒಳಮೀಸಲಾತಿಯನ್ನು ಜಾರಿ ಮಾಡುವ ಒತ್ತಡದಲ್ಲಿರುವ ಸರಕಾರವು 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀಸಲು ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿತ್ತು. ಅದರಲ್ಲೂ ಅಲೆಮಾರಿ ಗಳಂತಹ ಮುಖ್ಯವಾಹಿನಿಗೆ ಬಾರದ ಮತ್ತು ಧ್ವನಿ ಇಲ್ಲದ ಸಮುದಾಯಗಳ ವಿಷಯದಲ್ಲಿ ಸರಕಾರವು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಆದರೆ, ಸರಕಾರದ ಈ ನಿರ್ಣಯವು ಅಲೆಮಾರಿ ಸಮುದಾಯಗಳಿಗೆ ಮರಣ ಶಾಸನವನ್ನು ಬರೆದುಬಿಟ್ಟಿದೆ. ಸಾವಿರಾರು ವಷರ್Àಗಳಿಂದ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿಯೇ ಬದುಕಿ ಮನೆ ವಸತಿ ಮತ್ತು ಶಿಕ್ಷಣ ಮೂಲಭೂತ ಸೌಕರ್ಯಗಳಿಂದ ಅನಾಥರಾಗಿರುವ ಸಮುದಾಯಕ್ಕೆ ಮಾನ್ಯ ಮುಖ್ಯಮಂತ್ರಿಗಳು ಸಂಜೀವಿನಿ ಆಗಬೇಕೆ ಹೊರೆತು ಅವರಿಗೆ ಸಿಗುವ ಅನ್ನವನ್ನು ಕಸಿದು ಇನ್ನೊಬ್ಬರಿಗೆ ನೀಡುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದರು.
ಈ ಸಮಯದಲ್ಲಿ ಸುಡುಗಾಡು ಸಿದ್ದರ ಜಿಲ್ಲಾಧ್ಯಕ್ಷ ಜಿ.ಕೃಷ್ಣಪ್ಪ, ಹಂಡಿಜೋಗಿ ಸಮಾಜದ ಜಿಲ್ಲಾಧ್ಯಕ್ಷ ಎನ್.ಸಿದ್ದೇಶ್,ಶಿಳ್ಯಾಕ್ಯಾತ ಸಮಾಜ ಜಿಲ್ಲಾಧ್ಯಕ್ಷ ಕೃಣ್ಣಪ್ಪ, ಧಕ್ಕಲಿಗ ಸಮಾಜ ಜಿಲ್ಲಾಧ್ಯಕ್ಷ ರಾಜಣ್ಣ ಚನ್ನದಾಸರು ಸಮಾಜದ ಜಿಲ್ಲಾಧ್ಯಕ್ಷ, ಕಮಲಾಸನ್, ಜಗ್ಲಿ ಸಮಾಜ ಜಿಲ್ಲಾಧ್ಯಕ್ಷ ರಾಮಾಂಜನಪ್ಪ, ಅಲೆಮಾರಿ ಸಮಾಜಜಿಲ್ಲಾಧ್ಯಕ್ಷ ನಾಗರಾಜ್, ಅಲೆಮಾರಿ ಸಮಾಜದ ಮುಖಂಡರಾದ ಬಾಬು.ಟಿ, ಬುಡುಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಸುಧಾಕರ್, ಸಮಾಜ ಚಿಂತಕರಾದ ಯಾದವರೆಡ್ಡಿ ರಾಮು ಗೋಸಾಯಿ, ವೆಂಕಟೇಶ್ವರ ಭಾಗವಹಿಸಿದ್ದರು.