ಬೆಂಗಳೂರು : ದೇಶದ ವೈದ್ಯಕೀಯ ಹೆಸರಾಂತ ಮಹಾ ಸಂಶೋಧನಾ ಸಂಸ್ಥೆಯಾದ ಬಿಎಂಸಿಯ ಪ್ರಭಾರಿ ಡೀನ್ ಹಾಗೂ ಡೈರೆಕ್ಟರ್ (ಬೆಂಗಳೂರು ಮೆಡಿಕಲ್ ಕಾಲೇಜು) ಡಾ.ಕಾವ್ಯ ಎಸ್.ಟಿ. (ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪರವರ ಧರ್ಮ ಪತ್ನಿ) ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಈ ಹುದ್ದೆಯಲ್ಲಿ ಕಳೆದ 3 ವರ್ಷಗಳಿಗೂ ಹೆಚ್ಚು ಕಾಲ ಪ್ರಭಾರಿಯಲ್ಲೇ ಸೇವೆ ಸಲ್ಲಿಸುತ್ತಿದ್ದ ಡಾ. ರಮೇಶ್ ಕೃಷ್ಣ ಅವರನ್ನು ಸರ್ಕಾರ ಕೊನೆಗೂ ಬದಲಾವಣೆ ಮಾಡಿದೆ. ರಮೇಶ್ ಕೃಷ್ಣ ವಿರುದ್ದ ವಿವಿಧ ರೀತಿಯ ಅಕ್ರಮಗಳು ಆರೋಪ ಹೇಳಿ ಬಂದಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. 5ಕ್ಕೂ ಹೆಚ್ಚು ಪ್ರಮುಖ ಹಾಗೂ ಪ್ರತ್ಯೇಕ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳನ್ನು ಹೊಂದಿರುವ ಈ ಕಾಲೇಜ್ನಲ್ಲಿ ಔಷಧಗಳ ಪೂರೈಕೆ, ಚಿಕಿತ್ಸೆ ಹಾಗೂ ನೇಮಕಾತಿ ಸೇರಿದಂತೆ ಅನೇಕ ವಿಷಯಗಳಲ್ಲಿ ಅಕ್ರಮಗಳು ಹೆಚ್ಚಾಗಿದ್ದ ಆರೋಪಗಳಿದ್ದವು. ಇಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲವು ವೈದ್ಯಾಧಿಕಾರಿಗಳು ರಾಜ್ಯ ಹೈಕೋರ್ಟ್ ನಲ್ಲಿ ಹೋರಾಟ ಆರಂಭಿಸಿದ್ದರು.
ಇದರಿಂದ ಸಂಸ್ಥೆಯಲ್ಲಿ ಒಂದು ರೀತಿ ಅರಾಜಕತೆ ವಾತಾವರಣವಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳು ಇತ್ತೀಚೆಗೆ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಕಾಲೇಜಿನ ಕೆಲವು ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ವೈದ್ಯಕೀಯ ಸೇವೆಗಳನ್ನು ಪರಿಶೀಲಿಸಿದಾಗ ಅನೇಕ ರೀತಿಯ ಆಕ್ರಮಗಳು ಗಮನಕ್ಕೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಎಂಸಿಯ ವೈದ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಕಾವ್ಯ ಅವರನ್ನು ನೇಮಕ ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಡಾ.ಕಾವ್ಯ ಎಸ್.ಟಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ವೃತ್ತಿಯಲ್ಲಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕಾರ್ಯ ನಿರ್ವಹಿಸಿರುವ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.