ಬೆಂಗಳೂರು: ನಾಳೆಯಿಂದ ಆಸ್ತಿ ನೊಂದಣಿ ಶುಲ್ಕ ದುಪ್ಪಟ್ಟು ಹೆಚ್ಚಳವಾಗಲಿದೆ. ಆಸ್ತಿ ನೋಂದಣಿ ಶುಲ್ಕ ಹೆಚ್ಚಳ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಆಸ್ತಿ ನೋಂದಣಿ ಶುಲ್ಕವನ್ನು ಶೇಕಡ 1ರಿಂದ ಶೇಕಡ 2ರಷ್ಟು ಏರಿಕೆ ಮಾಡಲಾಗಿದೆ. ನಾಳೆಯಿಂದ ಪರಿಷ್ಕೃತ ಆಸ್ತಿ ನೋಂದಣಿ ಶುಲ್ಕ ಜಾರಿಯಾಗಲಿದೆ.
ವಿದ್ಯುತ್, ನೀರು, ಹಾಲು, ಬಸ್, ಮೆಟ್ರೋ ಪ್ರಯಾಣದರ ಏರಿಕೆ, ಮುದ್ರಾಂಕ ಶುಲ್ಕ ಸೇರಿ ವಿವಿಧ ದರ ಹೆಚ್ಚಾಗಿರುವ ಬೆನ್ನಲ್ಲೇ ಆಸ್ತಿಗಳ ನೋಂದಣಿ ಶುಲ್ಕವನ್ನು ದುಪ್ಪಟ್ಟು ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಆಗಸ್ಟ್ 31 ರಿಂದ ಅನ್ವಯವಾಗುವಂತೆ ನೋಂದಣಿ ಶುಲ್ಕವನ್ನು ಶೇಕಡ 1 ರಿಂದ ಶೇಕಡ 2ಕ್ಕೆ ಹೆಚ್ಚಳ ಮಾಡಲಾಗಿದೆ. ಸ್ಥಿರಾಸ್ತಿ ಶುದ್ಧ ಕ್ರಯ ಪತ್ರ, ಸ್ವಾಧೀನ, ಭೋಗ್ಯ ಪತ್ರ, ಕ್ರಯ ಉದ್ದೇಶದ ಜಿಪಿಎ ಸೇರಿ ವಿವಿಧ ಆಸ್ತಿ ನೋಂದಣಿಗೆ ಈ ಶುಲ್ಕ ಅನ್ವಯವಾಗುತ್ತದೆ.
ಇದುವರೆಗೆ ರಾಜ್ಯದಲ್ಲಿ ನಿವೇಶನ, ಭೂಮಿ, ಮನೆ ಸೇರಿದಂತೆ ಯಾವುದೇ ಸ್ಥಿರಾಸ್ತಿ ಖರೀದಿ ವೇಳೆ ಶೇ. 1ರಷ್ಟು ಶೇ. 1ರಷ್ಟು ನೋಂದಣಿ ಶುಲ್ಕ ಹಾಗೂ ಶೇ. 5.6ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು ಶೇ. 6.6ರಷ್ಟು ಶುಲ್ಕ ಭರಿಸಬೇಕಿತ್ತು, ಈಗ ನೋಂದಣಿ ಶುಲ್ಕ ಶೇ. 2ರಷ್ಟು ಆಗಿರುವುದರಿಂದ ಆಸ್ತಿಯ ಮಾರುಕಟ್ಟೆ ಬೆಲೆಯ ಶೇಕಡ 7.6 ರಷ್ಟು ಮುದ್ರಾಂಕ ಶುಲ್ಕಕ್ಕೆ ಭರಿಸಬೇಕಿದೆ. ಈಗಾಗಲೇ ನೋಂದಣಿಗೆ ಅರ್ಜಿ ಸಲ್ಲಿಸಿ ಅಪಾಯಿಂಟ್ಮೆಂಟ್ ಪಡೆದುಕೊಂಡವರಿಗೂ ಹೊಸ ದರ ಅನ್ವಯವಾಗಲಿದೆ ಎಂದು ಕಂದಾಯ ಇಲಾಖೆ ಆದೇಶಿಸಿದೆ.