ಚಿತ್ರದುರ್ಗ : ಶಾಂತಿಧೂತ ಲೋಕ ಪ್ರವಾದಿ ಮಹಮದ್ ಪೈಗಂಬರ್ರವರ 1500 ನೇ ಜಯಂತಿ ಅಂಗವಾಗಿ ಸಹಸ್ರಾರು ಮುಸ್ಲಿಂರು ನಗರದಲ್ಲಿ ಶುಕ್ರವಾರ ಈದ್ಮಿಲಾದ್ ಮೆರವಣಿಗೆ ನಡೆಸಿದರು.
ಬಡಾಮಕಾನ್ನಿಂದ ಹೊರಟ ಮೆರವಣಿಗೆ ಗೋಪಾಲಪುರ ರಸ್ತೆ, ಉಮರ್ ಸರ್ಕಲ್, ಅಂಜುಮನ್ ಸರ್ಕಲ್, ಎಸ್.ಬಿ.ಎಂ. ವೃತ್ತ, ಗಾಂಧಿ ವೃತ್ತ, ಆನೆಬಾಗಿಲು ಮೂಲಕ ದೊಡ್ಡಪೇಟೆ, ಕರುವಿನಕಟ್ಟೆ ಸರ್ಕಲ್, ಅಲಿ ಮೊಹಲ್ಲಾ, ಬುರುಜನಹಟ್ಟಿಯಿಂದ ಮಕ್ಕಾಮಸೀದಿ, ಚೋಳುಗುಡ್ಡ, ಅಗಸನಕಲ್ಲು, ರೈಲ್ವೆ ಸ್ಟೇಷನ್, ಮಿಲ್ಲತ್ ಸ್ಕೂಲ್ ರಸ್ತೆ, ಮಕ್ಕಾ ಮಸೀದಿ, ಗಾಂಧಿ ಸರ್ಕಲ್ನಿಂದ ದೊಡ್ಡಪೇಟೆ ಮೂಲಕ ಮೆರವಣಿಗೆ ಮಸೀದಿಗೆ ತಲುಪಿತು.
ಹೂ, ಹಾರ, ಸುನೇರಿ, ಹಸಿರು ಭಾವುಟಗಳಿಂದ ಅಲಂಕರಿಸಲಾಗಿದ್ದ ಚಾಂದಿನಿಯನ್ನು ಎತ್ತಿನ ಬಂಡಿಗಳಲ್ಲಿ ಮೆರವಣಿಗೆ ಕೊಂಡೊಯ್ಯಲಾಯಿತು. ದ್ವಿಚಕ್ರ ವಾಹನ, ಆಟೋ
ಕಾರು, ಅಪೇ ಗಾಡಿಗಳಲ್ಲಿ ಹಸಿರು ಭಾವುಟಗನ್ನಿಡಿದ ಯುಕವರ ಗುಂಪು ಮೆರವಣಿಗೆಯಲ್ಲಿ ಅಲ್ಲಾಹು ಅಕ್ಬರ್, ಜಿಂದಾಬಾದ್ ಎನ್ನುವ ಘೋಷಣೆಗಳನ್ನು ಕೂಗುತ್ತ ಸಾಗಿದರು. ಕುದುರೆ ಗಾಡಿಗಳು ಮೆರವಣಿಗೆಯಲ್ಲಿದ್ದವು. ಎತ್ತಿನ ಕೊಂಬುಗಳಿಗೆ ಬಲೂನ್ ಹಾಗೂ ಸುನೇರಿಯಿಂದ ಸಿಂಗರಿಸಲಾಗಿತ್ತು.
ಬಿಳಿ ವಸ್ತ್ರಗಳೊಂದಿಗೆ ತಲೆಗೆ ಬಿಳಿ ಟೋಪಿಗಳನ್ನು ಮುಸ್ಲಿಂರು ಧರಿಸಿದ್ದರೆ ಇನ್ನು ಕೆಲವರು ಪೇಟಗಳನ್ನು ಸುತ್ತಿಕೊಂಡಿದ್ದರು. ಮದರಸ ಶಾಲೆಯ ಮಕ್ಕಳು ಮೆರವಣಿಗೆಯಲ್ಲಿ ಸಾಗಿದರು.
ಎಸ್.ಬಿ.ಎಂ.ವೃತ್ತ, ಗಾಂಧಿ ಸರ್ಕಲ್ ಬಳಿ ಯುವಕರ ಗುಂಪು ದೊಡ್ಡ ದೊಡ್ಡ ಹಸಿರು ಭಾವುಟಗಳನ್ನು ತಿರುಗಿಸುತ್ತ ಮೆರವಣಿಗೆಯಲ್ಲಿ ಸಂಭ್ರಮಿಸಿದರು. ಗಾಂಧಿ ವೃತ್ತ, ಧರ್ಮಶಾಲಾ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮುಸ್ಲಿಂ ಯುವಕರು ಸಾರ್ವಜನಿಕರಿಗೆ ತಂಪು ಪಾನೀಯ ಹಾಗೂ ಸಿಹಿ ವಿತರಿಸಿದರು.
ಮೆರವಣಿಗೆಯಲ್ಲಿ ಟ್ರಾಫಿಕ್ ಜಾಮ್ ಆಗಬಾರದೆನ್ನುವ ಕಾರಣಕ್ಕೆ ಎಸ್.ಬಿ.ಎಂ.ವೃತ್ತ, ಗಾಂಧಿ ವೃತ್ತ ಇನ್ನಿತರೆ ಕಡೆ ಪೊಲೀಸ್ ಬ್ಯಾರಿಕೇಡ್ಗಳನ್ನಿಟ್ಟು ಗುಂಪು ಗುಂಪಾಗಿ ಮೆರವಣಿಗೆಗೆ ಅವಕಾಶ ಕಲ್ಪಿಸಿ ಅಂಬ್ಯುಲೆನ್ಸ್ ಹಾಗೂ ತುರ್ತು ವಾಹನಗಳು, ಮಹಿಳೆಯರು, ಮಕ್ಕಳು, ವಯೋವೃದ್ದರ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು.
ಪೊಲೀಸರ ಜೊತೆ ಗೃಹರಕ್ಷಕದಳದವರು ಮೆರವಣಿಗೆ ಸುಸೂತ್ರವಾಗಿ ಸಾಗಲು ಶ್ರಮಿಸಿದರು. ಹೆಚ್ಚುವರಿ ರಕ್ಷಣಾಧಿಕಾರಿ, ಡಿ.ವೈ.ಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ಗಳು, ಪಿ.ಎಸ್.ಐ.ಗಳು ಆಯಕಟ್ಟಿನ ಜಾಗಗಳಲ್ಲಿ ಮೆರವಣಿಗೆ ಸುಗಮವಾಗಿ ಸಾಗಲು ನೆರವಾದರು.
ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಅರುಣ್, ಮಜಹರ್ವುಲ್ಲಾ, ಮಳಲಿ ಶ್ರೀನಿವಾಸ್, ಚೇತನ್ ಇವರುಗಳು ಸ್ವಯಂ ಸೇವಕರಾಗಿ ಮೆರಣಿಗೆಯಲ್ಲಿದ್ದು, ಅಲ್ಲಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸರ ಜೊತೆ ಕೈಜೋಡಿಸಿದರು.
ಮುಸ್ಲಿಂ ಮುಖಂಡರುಗಳಾದ ಎಂ.ಸಿ.ಓ.ಬಾಬು, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಸೈಯದ್ ಅಲ್ಲಾಭಕ್ಷಿ,
ಚಾಂದ್ಪೀರ್, ಅಬ್ದುಲ್ಲಾ ಷಾವಲಿ, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ನ್ಯಾಯಾದಿಗಳಾದ ಮುಹಿಬುಲ್ಲಾ, ಸಾಧಿಕ್ವುಲ್ಲಾ, ರಫಿ, ನಗರಸಭೆ ನಾಮ ನಿರ್ದೇಶಕ ಸದಸ್ಯ ಹೆಚ್.ಶಬ್ಬಿರ್ಭಾಷ, ಡಾ.ಸೈಯದ್ ಇಸ್ಮಾಯಿಲ್, ವಖಾರ್ ಸೈಫ್, ಮುಕ್ಸೂದ್ಹುಸೇನ್, ಮಹಮದ್ ಆಜಾಂ, ಘಯಾಜ್ಹುಸೇನ್, ಖುದ್ದೂಸ್ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.