ಚಿತ್ರದುರ್ಗ : ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸಮಾಜ ಸೇವೆಗೆ ಸ್ವಲ್ಪ ಸಮಯವನ್ನು ಮೀಸಲಿಟ್ಟರೆ ಸಮಾಜದಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯ. ವಾಸವಿ ಕ್ಲಬ್ನಿಂದ ಇಂತಹ ಕಾರ್ಯ ನಡೆಯುತ್ತಿದೆ ಎಂದು ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ರಾಜೇಶ್ವರಿ ಸಿದ್ದರಾಮ್ ಹೇಳಿದರು.
ನಗರದ ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸೇವಾ ಸಪ್ತಾಹದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರು ಈ ಸಂಸ್ಥೆಯ ಚಟುವಟಿಕೆಗಳಿಗೆ ಕೈಜೋಡಿಸಿದರೆ ಒಳ್ಳೆಯ ಸಮಾಜ ನಿರ್ಮಾಣವಾಗಿ ಸದೃಢ ದೇಶ ಕಟ್ಟುವ ಕನಸು ನನಸಾಗಲಿದೆ. ವಾಸವಿ ಕ್ಲಬ್ ನಿಸ್ವಾರ್ಥ ಮನೋಭಾವವಿಟ್ಟುಕೊಂಡು ಸಮಾಜದಲ್ಲಿ ಹಿಂದುಳಿದ, ಬಡ ವರ್ಗದವರು ಹಾಗೂ ಅನಾಥರಿಗೆ ಸಹಾಯ ಹಸ್ತ ಚಾಚುತ್ತಿದೆ. ಜನರಲ್ಲಿ ಜವಾಬ್ದಾರಿ, ನಾಯಕತ್ವ ಹಾಗೂ ಮಾನವೀಯತೆಯ ಗುಣ ಬೆಳೆಸುವ ಕೆಲಸವಾಗುತ್ತಿದೆ. ಇಂದಿನ ದಿನಮಾನಗಳಲ್ಲಿ ವಾಸವಿ ಕ್ಲಬ್ ದೇಶದ ನೂರಾರು ನಗರಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಸಾವಿರಾರು ಸದಸ್ಯರ ಮೂಲಕ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿಸುತ್ತಿದೆ ಎಂದು ತಿಳಿಸಿದರು.
ವಾಸವಿ ಕ್ಲಬ್ ಸಾಮಾನ್ಯ ಸಂಘಟನೆಯಲ್ಲ. ಸೇವೆಯ ಸಂಕೇತ, ಮಾನವೀಯ ಮೌಲ್ಯಗಳ ದೀಪಸ್ತಂಭ. ನಾವು ಪ್ರತಿಯೊಬ್ಬರು ಈ ತತ್ವಗಳನ್ನು ಅಳವಡಿಸಿಕೊಂಡರೆ ಜೀವನ ಅರ್ಥಪೂರ್ಣವಾಗಿರುತ್ತದೆ ಎಂದರು.
ಹಿರಿಯ ಪತ್ರಕರ್ತ ಕೆ.ಪಿ.ಓಂಕಾರಮೂರ್ತಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಸಮಾಜದಲ್ಲಿ ಸೇವಾ ಮನೋಭಾವನೆ, ಸೌಹಾರ್ಧತೆ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಹತ್ವದ ಕಾರ್ಯವನ್ನು ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಮಾಡುತ್ತಿದೆ ಎಂದು ಪ್ರಶಂಶಿಸಿದರು.
ಕ್ಲಬ್ನ ಸದಸ್ಯರುಗಳು ನಿರಂತರ ಕೆಲಸಗಳ ಮೂಲಕ ಅಹಿಂಸೆಯ ಸಂದೇಶ, ಸಮಾನತೆ, ಶಾಂತಿ ಮತ್ತು ಮಾನವೀಯತೆಯನ್ನು ಸಾರುತ್ತಿದ್ದಾರೆ. ಆದರ್ಶಯುತ ಸಮಾಜ ನಿರ್ಮಾಣದ ಇವರ ಆಶಯ ನಿಜಕ್ಕೂ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪಠ್ಯಪುಸ್ತಕ, ನೋಟ್ಬುಕ್, ಶಾಲಾ ಸಾಮಾಗ್ರಿ ವಿತರಿಸುವುದರ ಜೊತೆಗೆ ಉಚಿತ ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರ, ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಬಯಲುಸೀಮೆ ಜನರಿಗೆ ಆರೋಗ್ಯದ ಸೇವೆ ಒದಗಿಸುತ್ತಿದೆ. ಪರಿಸರ ಸಂರಕ್ಷಣೆ, ಗಿಡ ನೆಡುವುದು, ಪ್ಲಾಸ್ಟಿಕ್ ಮುಕ್ತ ಅಭಿಯಾನ, ಸಾಮಾಜಿಕ ಜಾಗೃತಿ, ಮದ್ಯಪಾನ ನಿಷೇಧ, ಧೂಮಪಾನ ವಿರುದ್ದ ಜಾಗೃತಿಯಷ್ಟೆ ಅಲ್ಲದೆ ಕಲೆ, ಕ್ರೀಡೆ, ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಯುವಕರ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತಿರುವುದು ಅತ್ಯಂತ ಶ್ರೇಷ್ಟವಾದುದು ಎಂದರು.
ನೀನಾಸಂ ಕಲಾವಿದ ಕೆ.ಪಿ.ಎಂ.ಗಣೇಶಯ್ಯ ರಂಗ ಗೀತೆಗಳನ್ನು ಹಾಡಿದರು.
ಕ್ಲಬ್ನ ಜಡ್ಸಿ. ಎ.ಆರ್.ಲಕ್ಷ್ಮಣ, ಆರ್.ಸಿ.ಕೋಟೇಶ್ವರಗುಪ್ತ, ಖಜಾಂಚಿ ದೊಂತಿ ಸತ್ಯನಾರಾಯಣಗುಪ್ತ, ಉಪಾಧ್ಯಕ್ಷ ಎಂ.ಸಿ.ಸಂತೋಷ್, ನಿರ್ದೇಶಕರಾದ ಟಿ.ಎಸ್.ಸುಹಾಸ್, ಶೈಲಜಾ ಸತ್ಯನಾರಾಯಣ, ಸೌಮ್ಯ ಪ್ರವೀಣ್, ಜ್ಯೋತಿ ಲಕ್ಷ್ಮಣ್, ಪ್ರವೀಣ್, ರೇಖಾ ಸಂತೋಷ್, ಶ್ರೀನಿವಾಸ ಇವರುಗಳು ಈ ಸಂದರ್ಭದಲ್ಲಿದ್ದರು.