ರಾಜಸ್ಥಾನ : ಕೇಂದ್ರ ಲೋಕಸೇವಾ ಆಯೋಗ ನಡೆಸುವ ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಕೆಲವೇ ಕೆಲವು ಮಂದಿ ಮಾತ್ರ ಯಶಸ್ಸು ಸಾಧಿಸುತ್ತಾರೆ. ಹೀಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲಿ ದೀಪೇಶ್ ಕುಮಾರಿ ಕೂಡ ಒಬ್ಬರು.
ದೀಪೇಶ್ ಕುಮಾರಿ ಅವರು ರಾಜಸ್ಥಾನದ ಭರತ್ಪುರದ ಅಟಲ್ ಬಂಧ್ ಪ್ರದೇಶದವರು. ದೀಪೇಶ್ ಅವರ ಕುಟುಂಬಕ್ಕೆ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಅವರ ತಂದೆ ಗೋವಿಂದ್ ಕುಮಾರ್ ಅವರು ಏಳು ಜನರ ಕುಟುಂಬವನ್ನು ಸಲಹಲು ಪಕೋಡ ಮತ್ತು ನಮ್ಕೀನ್ನಂತಹ ತಿಂಡಿಗಳನ್ನು ಮಾರುತ್ತಿದ್ದರು. ಆರ್ಥಿಕ ಸಂಕಷ್ಟಗಳ ನಡುವೆಯೂ, ದೀಪೇಶ್ ಅವರಿಗೆ ಪೋಷಕರು ಉತ್ತಮ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸಿದರು.
ದೀಪೇಶ್ ಅವರ ಶೈಕ್ಷಣಿಕ ಪ್ರಯಾಣವು ಶಿಶು ಆದರ್ಶ ವಿದ್ಯಾ ಮಂದಿರದಲ್ಲಿ ಪ್ರಾರಂಭವಾಯಿತು. ಅಲ್ಲಿ ಅವರು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿದರು. ಅವರು 10ನೇ ತರಗತಿಯಲ್ಲಿ 98% ಮತ್ತು 12ನೇ ತರಗತಿಯಲ್ಲಿ 89% ಅಂಕಗಳನ್ನು ಗಳಿಸಿದರು. ಅವರ ಶೈಕ್ಷಣಿಕ ಸಾಧನೆಗಳು ಉನ್ನತ ಶಿಕ್ಷಣವನ್ನು ಮುಂದುವರಿಸಲು ಹಾದಿ ಮಾಡಿಕೊಟ್ಟವು. ದೀಪೇಶ್ ಅವರು ಜೋಧ್ಪುರದ ಎಂ.ಬಿ.ಎಂ. ಇಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದರು. ನಂತರ ಐಐಟಿ ಬಾಂಬೆಯಿಂದ ಎಂ.ಟೆಕ್ ಪದವಿಯನ್ನು ಪಡೆದರು.
ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ದೀಪೇಶ್ ಅವರು ಒಂದು ವರ್ಷದವರೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದರು. ನಂತರ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿ, ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. 2020ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ.
ಆದರೆ, ದೀಪೇಶ್ ಅವರು ಛಲಬಿಡದೇ ಯುಪಿಎಸ್ಸಿ ಪರೀಕ್ಷೆಗೆ ತಮ್ಮ ತಯಾರಿಯನ್ನು ಮುಂದುವರಿಸಿದರು. 2021ರಲ್ಲಿ 2ನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 93ನೇ ಅಖಿಲ ಭಾರತ ರ್ಯಾಂಕ್ ಗಳಿಸಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಈ ಮೂಲಕ ಅವರು ಐಎಎಸ್ ಹುದ್ದೆಗೆ ಆಯ್ಕೆಯಾಗುತ್ತಾರೆ.