ಚಿತ್ರದುರ್ಗ: ಡಾ.ಬಾಬು ಜಗಜೀವನ ರಾಂ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಚಿತ್ರದುರ್ಗ ಜಿಲ್ಲೆ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳಿಗೆ ಕಡ್ಡಾಯವಾಗಿ ಚರ್ಮಗಾರಿಕೆ ವೃತ್ತಿ ತೊಡಗಿಸಿಕೊಂಡಿರುವ ಚರ್ಮ ಕುಶಲಕರ್ಮಿಗಳಿಗೆ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 8 ಅರ್ಜಿ ಸಲ್ಲಿಸಲು ಕೊನೆಯ ದಿನ.
ಅರ್ಜಿ ಸಲ್ಲಿಕೆ ಈಗಾಗಲೇ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಿದ್ದು, ಸೇವಾಸಿಂಧು ಪೋರ್ಟಲ್ ಲಿಂಕ್ https:sevasindhuservices.karnataka.gov.in/ ಮೂಲಕ ಅರ್ಜಿಗಳನ್ನು ಗ್ರಾಮ ಒನ್ ಅಥವಾ ಕರ್ನಾಟಕ ಒನ್‍ನಲ್ಲಿ ಸಲ್ಲಿಸಬಹುದಾಗಿದೆ.
ಚರ್ಮ ಕುಶಲಕರ್ಮಿಗಳ ಕುಟುಂಬದ ಯುವಕರಿಗೆ ಹೊಸ ತಂತ್ರಜ್ಞಾನ, ವಿನ್ಯಾಸಗಳು ಹಾಗೂ ಮಾರುಕಟ್ಟೆ ಬೇಡಿಕೆಗಳ ಬಗ್ಗೆ ದೆಹಲಿ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತರಬೇತಿ ಪಡೆಯಲು ಅಧ್ಯಯನ ಪ್ರವಾಸ ಯೋಜನೆ, ಚರ್ಮಕಾರರ ಕೀರು ಆರ್ಥಿಕ ಚಟುವಟಿಕೆಗಳಿಗಾಗಿ ನೇರಸಾಲ ಯೋಜನೆ, ಡಾ.ಬಾಬು ಜಗಜೀವನ ರಾಂ ವಸತಿ ಕಾರ್ಯಗಾರ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹಿಂದಿನ ಸಾಲಿನಲ್ಲಿ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.