ಬೆಂಗಳೂರು: ಭಾರಿ ವಿರೋಧ, ಆಕ್ಷೇಪದ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿ ಅಮೋಘ ಜಯ ಸಾಧಿಸಿರುವ ಭಾರತ ಈ ಗೆಲವನ್ನು ಭಾರತದ ಸೇನೆಗೆಎ ಅರ್ಪಿಸಿ ಗೌರವ ನೀಡಿದೆ.
ಭಾರತ ತಂಡ ನಿನ್ನೆ ರಾತ್ರಿ ನಡೆದ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 127 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ ತಂಡ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಉಗ್ರರ ದೇಶವಾದ ಪಾಕಿಸ್ತಾನದ ಜೊತೆಗೆ ಕ್ರಿಕಟ್ ಆಡುವುದಕ್ಕೆ ಭಾರತದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ನಂತರದ ಸಂದರ್ಶನದಲ್ಲಿ ನೀಡಿದ ಹೇಳಿಕೆಯಿಂದ ಎಲ್ಲರ ಹೃದಯ ಗೆದ್ದರು. ಅವರು ಈ ಗೆಲುವನ್ನು ಭಾರತೀಯ ಭದ್ರತಾ ಪಡೆಗಳಿಗೆ ಅರ್ಪಿಸಿದರು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರೊಂದಿಗೆ ನಿಲ್ಲುವ ಬಗ್ಗೆಯೂ ಮಾತನಾಡಿದರು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಸೂರ್ಯ, ‘ಒಂದು ವಿಷಯ ಹೇಳಲು ಬಯಸಿದ್ದೆ. ಇದು ಸೂಕ್ತ ಅವಕಾಶ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ. ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ’ ಎಂದು ಹೇಳಿದರು.
ಈ ವಿಜಯವನ್ನು ನಮ್ಮ ಎಲ್ಲ ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇನೆ, ಅವರು ಅದಮ್ಯ ಧೈರ್ಯವನ್ನು ತೋರಿಸಿದ್ದಾರೆ. ಅವರು ನಮಗೆ ಸದಾ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಎಂದು ಭಾವಿಸುತ್ತೇವೆ ಮತ್ತು ನಮಗೆ ಅವಕಾಶ ಸಿಕ್ಕಾಗಲೆಲ್ಲಾ ನಾವು ಅವರಿಗೆ ಮೈದಾನದಲ್ಲಿ ನಗಲು ಹೆಚ್ಚಿನ ಕಾರಣಗಳನ್ನು ನೀಡುತ್ತೇವೆ ಎಂದು ಹೇಳಿದರು.
ನಿನ್ನೆ (ಸೆ. 14) ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಹುಟ್ಟುಹಬ್ಬವೂ ಆಗಿತ್ತು. ಈ ಗೆಲುವು ಆಹ್ಲಾದಕರ ಅನುಭವ ಮತ್ತು ಈ ಗೆಲುವು ಭಾರತಕ್ಕೆ ನನ್ನಿಂದ ಬಂದ ಅತ್ಯುತ್ತಮ ರಿಟರ್ನ್ ಗಿಫ್ಟ್ ಎಂದು ಅವರು ಹೇಳಿದರು. ನಾನು ಯಾವಾಗಲೂ ಕೊನೆಯವರೆಗೂ ಕ್ರೀಸ್‌ನಲ್ಲಿರಲು ಪ್ರಯತ್ನಿಸುತ್ತೇನೆ ಮತ್ತು ಇಂದು ಪಂದ್ಯವನ್ನು ಮುಗಿಸಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯಾಕಪ್‌ನ ಈ ಬದ್ಧವೈರಿಗಳ ಕದನದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿದ ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಭಾರತದ ಬೌಲಿಂಗ್ ಮುಂದೆ ಮಕಾಡೆ ಮಲಗಿ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 15.5 ಓವರ್ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆಬೀರಿತು.
128 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಮತ್ತೊಮ್ಮೆ ಉತ್ತಮ ಆರಂಭ ನೀಡಿದರು, ಆದರೆ ಇಬ್ಬರೂ ಪವರ್‌ಪ್ಲೇನಲ್ಲಿಯೇ ತಮ್ಮ ವಿಕೆಟ್‌ಗಳನ್ನು ಕಳೆದುಕೊಂಡರು. ಗಿಲ್ 10 ರನ್ ಗಳಿಸಿ ಔಟಾದರೆ, ಅಭಿಷೇಕ್ ಶರ್ಮಾ 31 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಆದಾಗ್ಯೂ ಅಭಿಷೇಕ್ ಔಟಾಗುವುದಕ್ಕೂ ಮುನ್ನ ತಂಡದ ಗೆಲುವನ್ನು ಖಚಿತಪಡಿಸಿದರು. ನಂತರ ನಾಯಕ ಸೂರ್ಯಕುಮಾರ್, ತಿಲಕ್ ವರ್ಮಾ ಅವರೊಂದಿಗೆ ಮೂರನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನಡೆಸಿದರು. ತಿಲಕ್ ವರ್ಮಾ 31 ರನ್ ಗಳಿಸಿ ಔಟಾದರು. ನಂತರ ಶಿವಂ ದುಬೆ ಮತ್ತು ಸೂರ್ಯಕುಮಾರ್ ಒಟ್ಟಾಗಿ ಭಾರತಕ್ಕೆ ಗೆಲುವಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. ನಾಯಕ ಸೂರ್ಯ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 47 ರನ್ ಬಾರಿಸಿದರೆ, ಶಿವಂ ದುಬೆ 1 ಸಿಕ್ಸರ್ ಸಹಿತ 10 ರನ್ ಬಾರಿಸಿ ಅಜೇಯರಾಗಿ ಉಳಿದರು.
ಸೂರ್ಯ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಮುಗಿಸಿದರು. ಭಾರತ ತಂಡವು 16 ನೇ ಓವರ್‌ನಲ್ಲಿ ಪಂದ್ಯವನ್ನು ಗೆದ್ದಿತು. ನಾಯಕ ಸೂರ್ಯ ತಮ್ಮ ಬ್ಯಾಟ್‌ನಿಂದ ಅತ್ಯಧಿಕ 47 ರನ್ ಗಳಿಸಿದರು. ಇವರಿಗೆ ಅತ್ಯುತ್ತಮ ಸಾಥ್ ನೀಡಿದ ತಿಲಕ್ ವರ್ಮಾ 31 ರನ್ ಬಾರಿಸಿದರು. ಪಾಕ್ನ 3 ವಿಕೆಟ್ ಕಿತ್ತ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.