ಆಪರೇಷನ್ ಸಿಂದೂರದ ಬಳಿಕ ದೇಶದ ಭದ್ರತಾ ಪಡೆಯಲ್ಲಿ ಡೋನ್‌ಗಳ ನಿರ್ವಹಣೆಯ ತರಬೇತಿಯ ಅವಶ್ಯಕತೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ಸೇರಿ ದೇಶದ 4 ಸ್ಥಳಗಳಲ್ಲಿ 19 ಡ್ರೋನ್ ಕೇಂದ್ರ ಹಾಗೂ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲು ಭಾರತೀಯ ಸೇನೆಯು ಯೋಜಿಸಿದೆ. ಆಪರೇಷನ್ ಸಿಂದೂರದ ವೇಳೆ ಡ್ರೋನ್‌ಗಳು ಅತಿ ಮುಖ್ಯ ಪಾತ್ರ ವಹಿಸಿದ್ದು, ಭದ್ರತಾ ಪಡೆಗಳಲ್ಲಿ ಇದೀಗ ಡೋನ್‌ಗಳು ಉತ್ತಮ ದರ್ಜೆಯ ಶಸ್ತ್ರಾಸ್ತ್ರ ವ್ಯವಸ್ಥೆ ಎನಿಸಿಕೊಂಡಿವೆ.
ಕೆಲವು ಆಯ್ದ ಉತ್ತಮ ಡ್ರೋನ್ ವ್ಯಾಪಾರಿಗಳ ಬಳಿ ಸೇನೆಯು ಡ್ರೋನ್ ತರಬೇತಿ ಕೇಂದ್ರಗಳ ತುರ್ತು ಸ್ಥಾಪನೆಗೆ ಪ್ರಸ್ತಾಪ ಇರಿಸಿದೆ ಎನ್ನಲಾಗಿದ್ದು, ಶೀಘ್ರವೇ ತರಬೇತಿ ಕಾರ್ಯಾರಂಭವಾಗಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಪ್ರತಿ ಯೋಧನಿಗೂ ಡ್ರೋನ್ ನಿರ್ವಹಣೆ ಸಾಮರ್ಥ್ಯ ವೃದ್ಧಿ
ಆಪರೇಷನ್ ಸಿಂದೂರದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಡ್ರೋನ್
ಕಾರ್ಯಚರಣೆಯಲ್ಲಿ ಡ್ರೋನ್ ಪ್ರಮುಖ ಶಸ್ತ್ರಾಸ್ತ್ರವಾಗಿ ಬಳಕೆ
ಡ್ರೋನ್ ಮೂಲಕ ಕಣ್ಣಾವಲು, ಗುಪ್ತಚರ ಮಾಹಿತಿ ಹೆಚ್ಚಳ
ತರಬೇತಿಗೆ 1000 ಡ್ರೋನ್‌ಗಳ ಬಳಕೆ
ನ್ಯಾನೋ, ಮೈಕ್ರೋ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಡೋನ್ ಸೇರಿ 200 ಮೀ.ನಿಂದ 50 ಕಿ.ಮೀ. ವ್ಯಾಪ್ತಿಯ 1,000ಕ್ಕೂ ಹೆಚ್ಚು ಡೋನ್‌ಗಳನ್ನು ಈ ತರಬೇತಿಯಲ್ಲಿ ಬಳಸಲು ಯೋಜಿಸಲಾಗಿದೆ. ಈ ಯೋಜನೆಯಡಿ ಹಲವು ವರ್ಗಗಳ ಡ್ರೋನ್‌ಗಳ ನಿರ್ವಹಣೆ ತರಬೇತಿ, ಸಂಬಂಧಿತ ಮೂಲಸೌಕರ್ಯಗಳಲ್ಲಿ ಅಣಕು ಕಾರ್ಯಾಚರಣೆ ಸೇರಿ ಇನ್ನೂ ಅನೇಕ ಚಟುವಟಿಕೆಗಳಿದ್ದು, ಸೇನೆಯ ಎಲ್ಲ ದರ್ಜೆಯ ಸಿಬ್ಬಂದಿಗಳಿಗೂ ತರಬೇತಿಗಳಿರಲಿವೆ. 2026ರ ಜನವರಿಯ ವೇಳೆಗೆ ಈ ತರಬೇತಿ ಕೇಂದ್ರಗಳ ಸ್ಥಾಪನೆಗೆ ಸೇನೆಯು ಯೋಜಿಸಿದೆ ಎನ್ನಲಾಗಿದೆ.
ಬೆಂಗಳೂರು ಸೇರಿ 4 ಸ್ಥಳಗಳಲ್ಲಿ ತರಬೇತಿ
ಈ ಯೋಜನೆಯಡಿ ಒಪ್ಪಂದ ಮಾಡಿಕೊಳ್ಳುವ ಡ್ರೋನ್ ಸಂಸ್ಥೆಗಳು, ಸ್ಥಾಪಿಸಲ್ಪಟ್ಟ ತರಬೇತಿ ಕೇಂದ್ರಗಳು ಹಾಗೂ ಮೂಲಸೌಕರ್ಯಗಳ ನಿರ್ವಹಣೆ ಜತೆಗೆ ನಿಗದಿತ ಸೇನಾ ಸಿಬ್ಬಂದಿಗೆ ತರಬೇತಿ ಆಯೋಜನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. ಬೆಂಗಳೂರು, ಡೆಹರಾಡೂನ್, ಮೊವ್ ಹಾಗೂ ದೇವ್‌ಲಾಲಿಯಲ್ಲಿ ತಲಾ 25 ಸಿಬ್ಬಂದಿಯಂತೆ 4-6 ದಿನಗಳ ಕಾಲ ಈ ಸಂಸ್ಥೆಗಳು ತರಬೇತಿ ನೀಡಬೇಕಿರುತ್ತದೆ.