ಬೆಂಗಳೂರು : ಮೈಸೂರು ವಿಶ್ವವಿಖ್ಯಾತ ದಸರಾಗೆ ಸಜ್ಜಾಗಿದೆ. ನಾಡಹಬ್ಬ ದಸರಾ ಮಹೋತ್ಸವವನ್ನು ಮಕ್ಕಳು ಸಹ ನೋಡಿ ಕಣ್ತುಂಬಿಕೊಳ್ಳಲಿ ಎಂದು ಶಿಕ್ಷಣ ಇಲಾಖೆ ನಾಳೆಯಿಂದ 18 ದಿನ ಸರ್ಕಾರಿ ಶಾಲೆಗಳಿಗೆ ಹಬ್ಬದ ರಜೆ ಘೋಷಣೆ ಮಾಡಿದೆ.
ಈ ಬಗ್ಗೆ ಶಿಕ್ಷಣ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದ್ದು, ನಾಳೆಯಿಂದ ಅಂದರೆ ಸೆ. 20 ರಿಂದ ಅಕ್ಟೋಬರ್ 7ರವರೆಗೆ ಸರ್ಕಾರಿ ಶಾಲೆಗಳಿಗೆ ಒಟ್ಟು 18 ದಿನ ಹಬ್ಬದ ರಜೆ ಘೋಷಿಸಿದೆ. ಆದರೆ ಕಡ್ಡಾಯವಾಗಿ ಅಕ್ಟೋಬರ್ 2ರಂದು ನಡೆಯಲಿರುವ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ 18 ದಿನ ರಜೆ ನೀಡಲಾಗಿದೆ. ಆ ಮೂಲಕ ರಾಜ್ಯದ ಶಾಲಾ ಮಕ್ಕಳಿಗೆ ಈ ಬಾರಿ ಭರ್ಜರಿ ರಜೆ ನೀಡಲಾಗಿದೆ. ಈ ರಜೆ ಮಕ್ಕಳಲ್ಲಿ ಹಬ್ಬದ ಸಂಭ್ರಮ ದುಪ್ಪಟ್ಟು ಮಾಡಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಅಂದರೆ ಅದು ರಾಜ ಪರಂಪರೆ, ಗತಕಾಲದ ವೈಭವ. ಅಷ್ಟೇ ಅಲ್ಲ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಉತ್ಸವ. ಸೆಪ್ಟೆಂಬರ್ 22ರಂದು ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಿಗೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಾಲನೆ ಸಿಗುತ್ತಿದೆ.
ಅಂದಿನಿಂದ ಅಕ್ಟೋಬರ್ 2ವರೆಗೆ ಅಂದರೆ 11 ದಿನಗಳ ಕಾಲ ದಸರಾ ಕಲರವ ಜೋರಾಗಿರಲಿದೆ. ಸರ್ಕಾರ ಈ ಬಾರಿ ದಸರಾ ಉದ್ಘಾಟನೆಗೆ ಅಂತರರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಕನ್ನಡತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದೆ.