ಬಿಷ್ಣುಪುರ : ಶಸ್ತ್ರಸಜ್ಜಿತ ವ್ಯಕ್ತಿಗಳು ಅರೆಸೈನಿಕ ವಾಹನದ ಮೇಲೆ ದಾಳಿ ಮಾಡಿದ ಪರಿಣಾಮ ಇಬ್ಬರು ಅಸ್ಸಾಂ ರೈಫಲ್ಸ್ ಯೋಧರು ಸಾವನ್ನಪ್ಪಿದ ಘಟನೆ ಮಣಿಪುರದ ಬಿಷ್ಣುಪುರದಲ್ಲಿ ಶುಕ್ರವಾರ ನಡೆದಿದೆ.
ಮಣಿಪುರದ ನಂಬೋಲ್ ಸಬಲ್ ಲೈಕೈ ಬಳಿ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಸೈನಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಶುಕ್ರವಾರ ಸಂಜೆ 5.50ರ ಸುಮಾರಿಗೆ ಭಯೋತ್ಪಾದಕರು ಹೆಚ್ಚು ಜನವಸತಿ ಪ್ರದೇಶದಲ್ಲಿ ಈ ದಾಳಿ ನಡೆಸಿದ್ದಾರೆ.
ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮೃತಪಟ್ಟಿದ್ದು, ಇತರ 5 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಆರ್‌ಐಎಂಎಸ್) ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜನನಿಬಿಡ ರಸ್ತೆಯಲ್ಲಿ ಸೈನಿಕರನ್ನು ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ ಬಳಿಕ ಭಯೋತ್ಪಾದಕರು ವ್ಯಾನ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ದಾಳಿಗೆ ಕಾರಣರಾದವರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಈಗ ಶೋಧ ಆರಂಭಿಸಿವೆ. ಇನ್ನು ಈ ಘಟನೆಯಲ್ಲಿ ಯಾವುದೇ ನಾಗರಿಕರಿಗೆ ಹಾನಿಯಾಗದಂತೆ ಭದ್ರತಾ ಪಡೆಗಳು ಎಚ್ಚರಿಕೆ ವಹಿಸಿದೆ.
“ದಾಳಿಯಲ್ಲಿ ಕನಿಷ್ಠ ಇಬ್ಬರು ಸೈನಿಕರು ಸಾವನ್ನಪ್ಪಿದ್ದು, ಇತರ ಹಲವರು ಗಾಯಗೊಂಡಿದ್ದಾರೆ. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಇಂಫಾಲ್‌ನಿಂದ 407 ಟಾಟಾ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಸಂಜೆ 6 ಗಂಟೆ ಸುಮಾರಿಗೆ ನಂಬೋಲ್ ಪೊಲೀಸ್ ಠಾಣೆ ಪ್ರದೇಶದಲ್ಲಿ ದಾಳಿ ನಡೆದಿದೆ. ದಾಳಿಗೊಳಗಾದ ಸ್ಥಳ ಇಂಫಾಲ್ ವಿಮಾನ ನಿಲ್ದಾಣದಿಂದ ಸುಮಾರು ೮ ಕಿಲೋಮೀಟರ್ ದೂರದಲ್ಲಿದೆ. ಇಂಫಾಲ್‌ನಿಂದ ಬಿಷ್ಣುಪುರ ಜಿಲ್ಲೆಯ ಕಡೆಗೆ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಬಂದೂಕುಧಾರಿಗಳ ಗುಂಪೊಂದು ಹೊಂಚು ಹಾಕಿ ದಾಳಿ ನಡೆಸಿದೆ” ಎಂದು ವರದಿಯಾಗಿದೆ.