ಬಳ್ಳಾರಿ : ವಿಜಯನಗರ ಜಿಲ್ಲೆಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ತಮ್ಮ ಮನೆಯ ಬಾಗಿಲ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಕೆತ್ತಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ಪಾರ್ವತಿ ತಮ್ಮ 15 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟ ಹಣವನ್ನು ಮನೆ ಬಾಗಿಲಿನ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಗೃಹಲಕ್ಷ್ಮಿ ಹಣದಿಂದಲೇ ಮಾಡಿಸಿರುವ ಬಾಗಿಲ ದ್ವಾರಕ್ಕೆ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನ ಕೆತ್ತಿಸಿದ್ದಾರೆ. ಸದ್ಯ ಬಾಗಿಲಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆ ಗಳಿಸಿದೆ.
ಕೆ. ಎಂ. ತಿಪ್ಪೇಸ್ವಾಮಿ ಮತ್ತು ಅವರ ಪತ್ನಿ ಪಾರ್ವತಮ್ಮ ಅವರು ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ ಬರುತ್ತಿದ್ದ ಹಣವನ್ನು ಉಳಿಸಿ ಈ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ತಿಪ್ಪೇಸ್ವಾಮಿ ಎರಡು ವರ್ಷಗಳ ಹಿಂದೆ ಮನೆಯನ್ನು ಕಟ್ಟಿದ್ದರು, ಆದರೆ ಆರ್ಥಿಕ ಸಂಕಷ್ಟದಿಂದಾಗಿ ಮುಂಭಾಗದ ಬಾಗಿಲು ಹಾಕಿಸಲು ಸಾಧ್ಯವಾಗಿರಲಿಲ್ಲ. ಈಗ, ಅವರ ಪತ್ನಿ ಕಳೆದ 15 ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯಡಿ ಪಡೆದ ಹಣವನ್ನು ಬಳಸಿ, ಅಂತಿಮವಾಗಿ ಬಾಗಿಲನ್ನು ಹಾಕಿಸಿದ್ದಾರೆ.
ಅವರು ಹಾಕಿಸಿದ ಬಾಗಿಲ ಮೇಲೆ ‘ಗೌರವಾನ್ವಿತ ಶ್ರೀ ಸಿದ್ದರಾಮಯ್ಯ’ ಎಂಬ ಶೀರ್ಷಿಕೆಯೊಂದಿಗೆ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನೂ ಕೆತ್ತಿಸಿದ್ದಾರೆ. ಈ ಮೂಲಕ ಸಿಎಂಗೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.
ತಮ್ಮ ಆರ್ಥಿಕ ಸಂಕಷ್ಟದಿಂದಾಗಿ ಈ ಮೊದಲು ಬಾಗಿಲು ಹಾಕಿಸಲು ಸಾಧ್ಯವಾಗಿರಲಿಲ್ಲ, ಆದರೆ ಗೃಹಲಕ್ಷ್ಮಿ ಯೋಜನೆ ಅವರಿಗೆ ಅಗತ್ಯ ಸಹಕಾರ ನೀಡಿದೆ ಎಂದು ದಂಪತಿ ತಿಳಿಸಿದ್ದಾರೆ. “ಸಿಎಂ ಸಿದ್ದರಾಮಯ್ಯ ಅವರು ಜಾರಿಗೆ ತಂದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳಂತಹ ಕಾರ್ಯಕ್ರಮಗಳು ನಾವು ಉತ್ತಮ ಜೀವನ ನಡೆಸಲು ಸಹಕಾರಿಯಾಗಿವೆ” ಎಂದು ತಿಪ್ಪೇಸ್ವಾಮಿ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯು ಈಗಾಗಲೇ ಅನೇಕ ಮಹಿಳೆಯರಿಗೆ ಸ್ವಾವಲಂಬಿ ಜೀವನ ರೂಪಿಸಲು ಸಹಾಯ ಮಾಡಿದೆ. ಇದೇ ರೀತಿ, ಈ ಬಡ ಕುಟುಂಬವು ಯೋಜನೆಯ ಆರ್ಥಿಕ ನೆರವನ್ನು ಬಳಸಿ, ಸಿಎಂ ಅವರಿಗೆ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದೆ. ಸಿದ್ದರಾಮಯ್ಯನವರ ಭಾವಚಿತ್ರವಿರುವ ಈ ಬಾಗಿಲನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಸಹ ಮನೆಗೆ ಭೇಟಿ ನೀಡುತ್ತಿದ್ದಾರೆ.