ದಾವಣಗೆರ: ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದಾಗ ದೇಶ ವಿವಿಧ ರಂಗಗಳಲ್ಲಿ ಮುಂದುವರೆಯಲು ಸಾಧ್ಯ ಈ ನಿಟ್ಟಿನಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಅವರು ಸೆ.20 ಚನ್ನಗಿರಿಯ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಗುರುಭವನ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯಕ್ಕಾಗಿ ಮುಂದಿನ ಪೀಳಿಗೆಗೆ ನಾವು ಏನಾದರೂ ಕೊಡುಗೆ ನೀಡಬೇಕಾಗಿದ್ದರೆ ಅದು ಶಿಕ್ಷಣ ವಾಗಿವಾಗಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಣವೇ ನಿರ್ಣಾಯಕವಾಗಿದ್ದು ಇದಕ್ಕಾಗಿ ಶಿಕ್ಷಕರು ಪ್ರಾಮಾಣಿಕೆ ಸೇವೆ ಸಲಿಸುತ್ತಿದ್ದಾರೆ. ಶಿಕ್ಷಣ ಎನ್ನುವುದು ನಿರಂತರ ಇದಕ್ಕೆ ಯಾವುದೇ ಅಂತಿಮ ಇರುವುದಿಲ್ಲ ಎಂದರು.
ವಲಸೆ ಹೋಗಿ ಗಂಡ, ಹೆಂಡತಿ ಇಬ್ಬರೂ ದುಡಿಯುತ್ತಿದ್ದರೆ ಮಕ್ಕಳು ಅಲ್ಲೆ ಆಟ ಆಡುತ್ತಿದ್ದರು. ಇದನ್ನು ಮನಗಂಡ ಮುಖ್ಯಮಂತ್ರಿ ದಿವಗಂತ ಬಂಗಾರಪ್ಪ ಅವರು ಅಂಗನವಾಡಿಗಳನ್ನು ತೆರೆದರು. ಇದರಿಂದ ಶಿಕ್ಷಣ ವಂಚಿತ ಮಕ್ಕಳು ಸಹ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ ವಿಧ್ಯಾರ್ಥಿಗಳಿಗೆ ಶೇಕಡ ಹದಿನೈದು ರಷ್ಟು ಅಂಕ ನೀಡಿ ಗ್ರಾಮೀಣ ಭಾಗದಲ್ಲಿ ಓದಿದವರಿಗೆ ವಿದ್ಯಾಭ್ಯಾಸ ಮತ್ತು ನೌಕರಿಯಲ್ಲಿ ನೆರವಾಗಿದ್ದರಷ್ಟೆ ಅಲ್ಲದೆ ಆಶ್ರಯ ಯೋಜನೆ ಮತ್ತು ಆರಾಧನಾ ಯೋಜನೆಗಳನ್ನು ಜಾರಿಗೆ ತಂದರು. ಇದರಿಂದ ಅನೇಕ ಗ್ರಾಮೀಣ ಜನರಿಗೆ ಸಾಕಷ್ಟು ಅನುಕೂಲವಾಗಿ ಬಡತನದಿಂದ ಮೇಲೆ ಬರಲು ಸಾಧ್ಯವಾಗಿದೆ ಎಂದರು.
ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅನೇಕ ಮನೆಗಳು ಬೆಳಗುತ್ತಿವೆ, ಪ್ರಾಣಾಳಿಕೆಯಲ್ಲಿ ತಿಳಿಸಿದಂತೆ ಹಳೆ ಪಿಂಚಣಿ ಪದ್ಧತಿಯನ್ನು ಜಾರಿಗೆ ತರಲಿದ್ದು ಇದರಿಂದ ಲಕ್ಷಾಂತರ ನೌಕರರಿಗೆ ಅನುಕೂಲ ವಾಗಲಿದೆ. ಇಲಾಖೆಯಲ್ಲಿ ಈಗಾಗಲೇ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿದ್ದು ಶಿಕ್ಷಕರಿಗೆ ಮುಂಬಡ್ತಿಯಲ್ಲಿ ಅನುಕೂಲವಾಗಲಿದೆ ಇದನ್ನು ಆದಷ್ಟು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದರು.