ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನವರಾತ್ರಿಯ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ದೇಶದ ಜನರ ಮನಸ್ಸಿನಲ್ಲಿ ಭಕ್ತಿ, ಧೈರ್ಯ, ಸಂಯಮ ಹಾಗೂ ದೃಢಸಂಕಲ್ಪ ಹೆಚ್ಚಾಗಿ, ಎಲ್ಲರಿಗೂ ಹೊಸ ಶಕ್ತಿ ಹಾಗೂ ನಂಬಿಕೆಯನ್ನು ನೀಡಲಿ ಎಂದು ಅವರು ಹಾರೈಸಿದ್ದಾರೆ.
ಪ್ರಧಾನಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, “ನವರಾತ್ರಿಯ ಶುಭಾಶಯಗಳು. ಭಕ್ತಿ, ಧೈರ್ಯ, ಸಂಯಮ ಮತ್ತು ದೃಢಸಂಕಲ್ಪದಿಂದ ತುಂಬಿರುವ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನಕ್ಕೂ ಹೊಸ ಶಕ್ತಿ ಮತ್ತು ನಂಬಿಕೆಯನ್ನು ತರಲಿ. ಜೈ ಮಾತಾ ದಿ!” ಎಂದು ಬರೆದಿದ್ದಾರೆ.
ಈ ಸಂದರ್ಭದಲ್ಲಿಯೇ ಜಿಎಸ್‌ಟಿ ಸುಧಾರಣೆ ಹಾಗೂ ‘ಸ್ವದೇಶಿ ಮಂತ್ರ’ದ ಮಹತ್ವವನ್ನು ಅವರು ಒತ್ತಿಹೇಳಿದ್ದಾರೆ. “ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವವು ವಿಶೇಷ ಮಹತ್ವ ಪಡೆದಿದೆ. ಈ ಸಂದರ್ಭದಲ್ಲಿ ಸ್ವದೇಶಿ ಮಂತ್ರ ಹೊಸ ಶಕ್ತಿಯನ್ನು ಪಡೆದುಕೊಳ್ಳುತ್ತಿದೆ. ನಾವು ಎಲ್ಲರೂ ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭಾರತದ ಗುರಿಯನ್ನು ಸಾಧಿಸಲು ಒಂದಾಗಿ ಹೆಜ್ಜೆ ಹಾಕೋಣ” ಎಂದು ಟ್ವೀಟ್ ಮಾಡಿದ್ದಾರೆ.
ಇಂದಿನ ನವರಾತ್ರಿಯ ವಿಶೇಷತೆ ಆಗಿರುವ ತಾಯಿ ಶೈಲಪುತ್ರಿಯ ಪೂಜೆ ಕುರಿತು ಮಾತನಾಡಿದ ಮೋದಿ, “ತಾಯಿ ಶೈಲಪುತ್ರಿಯ ಪ್ರೀತಿ ಮತ್ತು ಆಶೀರ್ವಾದದಿಂದ ಪ್ರತಿಯೊಬ್ಬರ ಜೀವನವು ಅದೃಷ್ಟ ಮತ್ತು ಆರೋಗ್ಯದಿಂದ ತುಂಬಿರಲಿ” ಎಂಬ ಹಾರೈಕೆಯನ್ನೂ ಅವರು ವ್ಯಕ್ತಪಡಿಸಿದರು.
ಹಾಗೆಯೇ ನವರಾತ್ರಿಯ ಭಕ್ತಿಯ ಸಾರವನ್ನು ಸಂಪ್ರದಾಯಿಕ ಸಂಗೀತದ ಮೂಲಕ ಹಂಚಿಕೊಂಡ ಪ್ರಧಾನಿ, ಪಂಡಿತ್ ಜಸ್‌ರಾಜ್ ಅವರ ಭಜನೆಗಳನ್ನೂ ಹಂಚಿಕೊಂಡಿದ್ದಾರೆ.“ನವರಾತ್ರಿಯ ಈ ಹಬ್ಬ ಭಕ್ತಿಯ ಉತ್ಸವ. ಅನೇಕರು ತಮ್ಮ ಭಕ್ತಿಯನ್ನು ಸಂಗೀತದ ಮೂಲಕ ವ್ಯಕ್ತಪಡಿಸುತ್ತಾರೆ. ಪಂಡಿತ್ ಜಸ್‌ರಾಜ್ ಅವರ ಸಂಗೀತದಿಂದ ತುಂಬಿರುವ ಒಂದು ಭಕ್ತಿಯ ಭಜನೆಯನ್ನು ನಾನು ಶೇರ್ ಮಾಡುತ್ತಿದ್ದೇನೆ” ಎಂದು ಅವರು ಬರೆದಿದ್ದಾರೆ.