ಬೆಂಗಳೂರು : ಬಿಜೆಪಿ ಸಂಸದ ಡಾ ಕೆ ಸುಧಾಕರ್ ಪತ್ನಿಯನ್ನು ಡಿಜಿಟಲ್ ಅರೆಸ್ಟ್ ಮಾಡಿದ ಸೈಬರ್ ವಂಚಕರು 14 ಲಕ್ಷ ರೂ. ಹಣ ದೋಚಿರುವ ಘಟನೆ ನಡೆದಿದೆ.
ಕಳೆದ ಆ.26 ರಂದು ಪಶ್ಚಿಮ ಸೈಬರ್ ಠಾಣೆಗೆ ವೈದ್ಯರಾಗಿರುವ ಸಂಸದರ ಪತ್ನಿ ಡಾ.ಪ್ರಿಯಾ ದೂರು ನೀಡಿದ್ದರು. ಕೂಡಲೇ ದೂರು ನೀಡಿದ್ದರಿಂದ 14 ಲಕ್ಷ ರೂ ಹಣ ಕೂಡ ವಾಪಸ್ ಬಂದಿದೆ. ಸದ್ಯ ಸೈಬರ್ ವಂಚಕರ ಜಾಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಆ. 26 ರಂದು ಡಾ. ಪ್ರೀತಿ ಸುಧಾಕರ್ ಅವರ ಮೊಬೈಲಿಗೆ ಸೈಬರ್ ವಂಚಕರು ಕರೆ ಮಾಡಿ, ನಾವು ಮುಂಬೈ ಸೈಬರ್ ವಿಭಾಗದಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ದಾಖಲೆಗಳನ್ನ ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿಕೊಂಡು ನಿಮ್ಮ ಹೆಸರಲ್ಲಿ ಕ್ರೆಡಿಡ್ ಕಾರ್ಡ್ ಮಾಡಿಸಿ ಅದರಿಂದ ಅಕ್ರಮ ವ್ಯವಹಾರ ನಡೆಸಿ ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್ ದೇಶಗಳಿಗೆ ಕಾನೂಬಾಹಿರ ಚಟುವಟಿಕೆ ನಡೆಸಲು ಜನರನ್ನ ಕಳುಹಿಸಿದ್ದಾನೆ. ಈ ಪ್ರಕರಣದಲ್ಲಿ ಸದ್ಬತ್ ಖಾನ್ ಅರೆಸ್ಟ್ ಮಾಡಲಾಗಿದ್ದು, ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದೆ. ಇದರ ವಿಚಾರಣೆ ಅವಶ್ಯಕತೆಯಿದ್ದು ವೀಡಿಯೊಕಾಲ್ ಅಟೆಂಡ್ ಮಾಡುವಂತೆ ಹೇಳಿದ್ದಾರೆ.
ಅಷ್ಟೇ ಅಲ್ಲದೇ ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡೋದಾಗಿ ಬೆದರಿಸಿದ್ದಾರೆ. ನಿಮ್ಮ ಖಾತೆ ಅಕ್ರಮವಾಗಿದ್ದು ಅದನ್ನು ಪರಿಶೀಲಿಸಲು ಹಣ ಹಾಕಿ ಎಂದು ಬೆದರಿಸಿ ಡಾ.ಪ್ರೀತಿ ಅವರಿಂದ 14 ಲಕ್ಷ ರೂ. ಹಣ ಹಾಕಿಸಿಕೊಕೊಂಡಿದ್ದಾರೆ.
ಹಣ ಹಾಕಿದ ಬಳಿಕ ಆರ್ಬಿಐ ನಿಯಮ ಪರೀಶೀಲನೆ ಮಾಡಿ 45 ನಿಮಿಷದಲ್ಲಿ ವಾಪಸ್ ಹಾಕುವುದಾಗಿ ಹೇಳಿದ್ದಾರೆ. ವಂಚಕರು ಹೇಳಿದ ಖಾತೆಗೆ ಪ್ರೀತಿ ಸುಧಾಕರ್ 14 ಲಕ್ಷ ರೂ.ಹಣವನ್ನ ಹಾಕಿದ್ದಾರೆ. ಹಣ ಹಾಕಿದ ನಂತರ ವಂಚಯಾಗಿರುವುದು ಗೊತ್ತಾಗಿ ವೆಸ್ಟ್ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರೀತಿ ಸುಧಾಕರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು ಹಣ ಹಾಕಿದ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ಖಾತೆಯಿಂದ 14 ಲಕ್ಷ ರೂ. ಹಣವನ್ನು ಪ್ರೀತಿ ಅವರಿಗೆ ನೀಡಲಾಗಿದ್ದು ಸೈಬರ್ ಕಳ್ಳರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.