ಚಿತ್ರದುರ್ಗ : ಅಡುಗೆ ಮನೆಗೆ ಅತ್ಯಗತ್ಯವಾಗಿ ಬೇಕಾಗಿರುವ ಈರುಳ್ಳಿ ಇಲ್ಲದಿದ್ದರೆ ಮಹಿಳೆಯರು ಅಡುಗೆ ಕೋಣೆ ಪ್ರವೇಶಿಸುವುದಿಲ್ಲ. ಪ್ರತಿಯೊಂದು ತರಕಾರಿಯೂ ಊಟಕ್ಕೆ ಬೇಕೆ ಬೇಕು. ಈರುಳ್ಳಿ ನಷ್ಟವಾಗಿರುವುದಕ್ಕೆ ಕೂಡಲೆ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಅಧಿಕಾರಿಗಳನ್ನು ಹೊರಗೆ ಕಳಿಸುತ್ತೇವೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷೆ ಶಾಂತಾ ಅಶೋಕ್ ಎಚ್ಚರಿಸಿದರು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ಈರುಳ್ಳಿ ಸುರಿದು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸಾಲ ಮಾಡಿ ಬೀಜ, ಗೊಬ್ಬರ ಖರೀಧಿಸಿ ಭೂಮಿಗೆ ಸುರಿದಿದ್ದೇವೆ. ಖರ್ಚು ಮಾಡಿರುವ ಕೂಲಿಯು ಕೈಗೆ ಸಿಕ್ಕಿಲ್ಲ. ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಒಟ್ಟಾರೆ ಎಲ್ಲಾ ಬೆಳೆಗಳು ಹಾನಿಯಾಗಿವೆ. ತಡಮಾಡದೆ ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಬಾಬಾಗೌಡ ಪಾಟೀಲ್ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಹೇಳಿದರು.
ಅಭಿವೃದ್ದಿ ಕಾಮಗಾರಿಗಳಿಗೆ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ಕಮಿಷನ್ ಹೊಡೆಯಲು ಸರ್ಕಾರದಲ್ಲಿ ಹಣವಿದೆ. ರೈತರಿಗೆ ಪರಿಹಾರ ನೀಡಲು ಹಣವಿಲ್ಲದಷ್ಟು ಬಡವಾಗಿದೆಯೇ ಎಂದು ಶಾಂತಾ ಅಶೋಕ್ ಸರ್ಕಾರವನ್ನು ಪ್ರಶ್ನಿಸಿದರು?
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಮಾತನಾಡಿ ಜಿಲ್ಲೆಯ ಪ್ರಮುಖ ಬೆಳೆ ಈರುಳ್ಳಿ ಪ್ರತಿ ವರ್ಷದಂತೆ ಈ ಬಾರಿಯೂ ನಷ್ಟವಾಗಿದೆ.
ಮಳೆ ಹೆಚ್ಚಾಗಿ ಹೊಲದಲ್ಲಿಯೇ ಕೊಳೆಯುತ್ತಿದೆ. ಕೂಲಿ ಕೂಡ ಸಿಗುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಸಾಲ ಮನ್ನ ಮಾಡಿ ಪರಿಹಾರ ಕೊಡುವುದಾಗಿ ಘೋಷಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಧ್ಯ ಕರ್ನಾಟಕದ ಬಯಲು ಸೀಮೆ ಚಿತ್ರದುರ್ಗದ ರೈತರ ಕಷ್ಟ ಏಕೆ ಅರ್ಥವಾಗುತ್ತಿಲ್ಲ? ಎಕರೆಗೆ ಮೂವತ್ತರಿಂದ ನಲವತ್ತು ಸಾವಿರ ರೂ.ಗಳನ್ನು ಖರ್ಚು ಮಾಡಿರುವ ರೈತರು ಅತಂತ್ರವಾಗಿದ್ದಾರೆ. ಕೂಡಲೆ ಪರಿಹಾರದ ಹಣ ನೀಡಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಕಳೆದ ತಿಂಗಳು 20 ದಿನಗಳ ಕಾಲ ಮಳೆ ಸುರಿದು ಮೋಡ ಕವಿದ ವಾತಾವರಣವಿದ್ದುದರಿಂದ ಈರುಳ್ಳಿ ನಾಶವಾಗಿದ್ದು, ಅಲ್ಪಸ್ವಲ್ಪ ಉಳಿದ ಈರುಳ್ಳಿ ಗುಣಮಟ್ಟವಿಲ್ಲವೆಂದು ಒಂದು ಕ್ವಿಂಟಾಲ್ಗೆ 150 ರಿಂದ 200 ರೂ.ಗಳಿಗೆ ಮಾರಾಟವಾಗುತ್ತಿದೆ. ಇದರಿಂದ ರೈತನ ಕಣ್ಣಲ್ಲಿ ನೀರು ಬರುವಂತಾಗಿದೆ. ರಾಜ್ಯ ಸರ್ಕಾರ ಕೂಡಲೆ ನೆರೆಯ ಆಂಧ್ರ ಸರ್ಕಾರದಂತೆ ಬೆಳೆ ಪರಿಹಾರ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಿ ಈರುಳ್ಳಿ ಖರೀಧಿ ಕೇಂದ್ರ ತೆರೆಯಬೇಕು. ಕಂದಾಯ ಇಲಾಖೆ ನಿರ್ಲಕ್ಷೆಯಿಂದ ರೈತರಿಗೆ ಬೆಳೆ ಪರಿಹಾರ ಕೈಸೇರಿಲ್ಲ. ಪ್ರತಿ ಎಕರೆಗೆ ಮೂವತ್ತು ಸಾವಿರ ರೂ.ಗಳ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರುಗಳಾದ ಎಂ.ಬಿ.ತಿಪ್ಪೇಸ್ವಾಮಿ, ಬಸ್ತಿಹಳ್ಳಿ ಜಿ.ಸುರೇಶ್ಬಾಬು, ಟಿ.ಮುನಿಸ್ವಾಮಿ, ಕರಿಬಸವಯ್ಯ, ಆರ್.ಚೇತನ್ ಯಳನಾಡು, ಓ.ಟಿ.ತಿಪ್ಪೇಸ್ವಾಮಿ, ಎಂ.ಎಸ್.ಪ್ರಭು, ಎನ್.ನಾಗರಾಜ, ಎಸ್.ಕೆ.ಕುಮಾರಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.