ಬೆಂಗಳೂರು : ಸಿನಿಮಾ ಟಿಕೆಟಿಗೆ ಗರಿಷ್ಟ 200 ರೂ. ದರ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾ. ರವಿ ಹೊಸಮನಿ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಟಿಕೆಟ್ ದರ ಗರಿಷ್ಠ 200 ಏಕರೂಪ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಬೇಕೆಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಟಿಕೆಟ್ ದರ ನಿಗದಿ ಸಂಬಂಧ ಜಾರಿಗೆ ತಂದಿರುವ ‘ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025’ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್ಟೈನ್ಮೆಂಟ್ ಹಾಗೂ ವಿ.ಕೆ. ಫಿಲ್ಮ್ಸ್ ತಕಾರರು ಅರ್ಜಿ ಇತ್ಯರ್ಥವಾಗುವವರೆಗೆ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿತ್ತು.
ಸರ್ಕಾರ ಏಕಪಕ್ಷಿಯವಾಗಿ ನಿರ್ಧಾರ ಕೈಗೊಂಡು ದರ ನಿಗದಿ ಮಾಡಿದೆ. ಇದು ಕಾನೂನು ಬಾಹಿರ ಆದೇಶವಾಗಿದ್ದು, ನಾವು ಕೋಟ್ಯಂತರ ರೂ. ಹೂಡಿಕೆ ಮಾಡಿ ಸಿನಿಮಾ ನಿರ್ಮಾಣ ಮಾಡುತ್ತೇವೆ. ಕಡಿಮೆ ಸೀಟುಗಳಿಗೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ. ಸಿನಿಮಾ ನಿರ್ಮಿಸಲು ಸಾಕಷ್ಟು ಶ್ರಮ, ಬಂಡವಾಳ ಬೇಕಾಗುತ್ತದೆ. ಚಿತ್ರ ನಿರ್ಮಾಣ, ಪ್ರದರ್ಶನದ ಬಗ್ಗೆ ಮಾಹಿತಿ ತಿಳಿಯದೇ ಈ ನಿರ್ಧಾರ ಕೈಗೊಂಡಿದೆ ಎಂದು ಅರ್ಜಿದಾರರು ಕೋರ್ಟ್ ಗೆ ತಿಳಿಸಿದರು.
ಚಿತ್ರವನ್ನು ವೀಕ್ಷಿಸಬೇಕೋ ಬೇಡವೋ ಎನ್ನುವುದು ವೀಕ್ಷಕನಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು ಸಂಸ್ಥೆಗಳು ವಾದಿಸಿದ್ದವು.