ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿನ ಬುರುಡೆ ಪ್ರಕರಣದ ಆರೋಪಿ ಮಂಡ್ಯದ ಚಿನ್ನಯ್ಯ ಸಿ.ಎನ್. ಮತ್ತು ಆತನ ಪತ್ನಿ ಮಲ್ಲಿಕಾ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ತಿಮರೋಡಿ ಮಹೇಶ್ ಶೆಟ್ಟಿಯ ಆಪ್ತರಲ್ಲಿ ಓರ್ವರಾದ ಗುತ್ತಿಗೆದಾರ ಉಜಿರೆ ನಿವಾಸಿ ನಿತಿನ್ ಯಾನೆ ನೀತು ಅವರನ್ನು ಎಸ್‌ಐಟಿ ನೋಟಿಸ್ ನೀಡಿ ವಿಚಾರಣೆ ಆರಂಭಿಸಿದೆ.
ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ಬಗ್ಗೆ ಎಸ್‌ಐಟಿ ದಾಖಲೆ ಮುಂದಿಟ್ಟು ವಿಚಾರಣೆ ಮಾಡಿದಾಗ ಹಣ ವರ್ಗಾವಣೆ ಮಾಡಿದ್ದನ್ನು ನಿತಿನ್ ಒಪ್ಪಿಕೊಂಡಿದ್ದಾನೆ. ಹೀಗಾಗಿ ಆತನ ಮೊಬೈಲನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹಣ ವರ್ಗಾವಣೆ ವಿಚಾರವಾಗಿ ಈಗಾಗಲೇ ಹಲವು ವದಂತಿಗಳು ಸೃಷ್ಟಿಯಾಗಿದ್ದು, ನಗದು ರೂಪದಲ್ಲಿ ಹಲವು ಲಕ್ಷ ರೂ. ಮತ್ತು 3 ಲಕ್ಷ ರೂ. ಹಂತಹಂತವಾಗಿ ಬ್ಯಾಂಕ್ ಮೂಲಕ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿತ್ತು. ಅದರಂತೆ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ ವಿಚಾರವಾಗಿ ದಾಖಲೆಗಳು ಎಸ್‌ಐಟಿಗೆ ಲಭಿಸಿದ್ದರಿಂದ ಮಹೇಶ್ ಶೆಟ್ಟಿ ತಿಮರೋಡಿಯ ಹಲವಾರು ಮಂದಿ ಆಪ್ತರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇಂದು ಚಿನ್ನಯ್ಯ ಸಾಕ್ಷಿ ಹೇಳಿಕೆ ದಾಖಲು ಧರ್ಮಸ್ಥಳದ ಬಂಗ್ಲೆಗುಡ್ಡೆ ಸುತ್ತಮುತ್ತ ಶವ ಹೂತಿರುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ ಬುರುಡೆ ಪ್ರಕರಣದ ಆರೋಪಿ ಮಂಡ್ಯದ ಸಿ.ಎನ್. ಚಿನ್ನಯ್ಯ ತಪ್ಪೊಪ್ಪಿಗೆ ಹೇಳಿಕೆ ಸೆ.23ಕ್ಕೆ ನ್ಯಾಯಾಲಯ ದಿನ ನಿಗದಿ ಮಾಡಿತ್ತು. ಅದರಂತೆ ಇಂದು ಅವರು ಹೇಳಿಕೆ ದಾಖಲಿಸಲಿರುವರು.
ಮತ್ತೆ ತಿಮರೋಡಿ ಗೈರು ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಕಾಯ್ದೆಯಡಿ ಈಗಾಗಲೇ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಎರಡು ಬಾರಿ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡದೆ ತಲೆಮರೆಸಿಕೊಂಡಿದ್ದಾರೆ. ಸೆ.23ರೊಳಗೆ ವಿಚಾರಣೆಗೆ ಹಾಜರಾಗಲು ಗಡುವು ನೀಡಿದ್ದು, ಈ ವಿಚಾರವಾಗಿ ನ್ಯಾಯಾಲಯದಿಂದ ಜಾಮೀನು ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.