ಗೋಕರ್ಣ : ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿರಮಣೀಯ ತೀರ ಪ್ರದೇಶಗಳಿಗೆ ಇದೀಗ ಕೇಂದ್ರ ಸರ್ಕಾರದ ಪರಮಾಣು ಖನಿಜಗಳ ಅನ್ವೇಷಣಾ ನಿರ್ದೇಶನಾಲಯದ ನೋಟ ಬಿದ್ದಿದೆ. ಅತ್ಯಂತ ಅಪರೂಪದ ಹಾಗೂ ದುಬಾರಿ ಖನಿಜಗಳಾಗಿ ಪರಿಗಣಿಸಲ್ಪಡುವ ‘ಜಿನೋಟೈಮ್’ ಖನಿಜದ ಶೋಧನೆ ಗೋಕರ್ಣದಿಂದ ಶರಾವತಿ ನದಿವರೆಗಿನ 100 ಮೀಟರ್ ಅಗಲದ ಹಾಗೂ 500 ಮೀಟರ್ ಉದ್ದದ ಕಡಲ ತೀರದ ಮೇಲ್ಭಾಗದಲ್ಲಿ ಶಾಂತವಾಗಿ ನಡೆಯುತ್ತಿದೆ.
ಈ ಪ್ರದೇಶದಲ್ಲಿ ಈಗಾಗಲೇ ಎರಡು ಹಂತದ ಅಧ್ಯಯನ (ಜಿ3 ಮತ್ತು ಜಿ2) ಮುಗಿದಿದ್ದು, ಶೀಘ್ರದಲ್ಲೇ ಬೋರ್‌ಹೋಲ್ ನಡೆಸಲಾಗುವುದು. ಇದರ ಮೂಲಕ ಜಿನೋಟೈಮ್ ಅಥವಾ ಇತರ ರೇರ್ ಅರ್ಥ್ ಎಲಿಮೆಂಟ್‌ಗಳು ನಿಜವಾಗಿಯೂ ಈ ಪ್ರದೇಶದಲ್ಲಿ ಇದೆಯಾ ಎನ್ನುವುದು ಖಚಿತಪಡಿಸಿಕೊಳ್ಳಲಾಗುತ್ತದೆ. ಈ ಖನಿಜಗಳು ಲಭ್ಯವಿದ್ದಲ್ಲಿ, ಗಣಿ ಹರಾಜು ಮೂಲಕ ಖನಿಜ ಉತ್ಪಾದನೆಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಜಿನೋಟೈಮ್ ಎಂಬುದು ಏನು?
ಜಿನೋಟೈಮ್ ಒಂದು ರೇರ್ ಅರ್ಥ್ ಎಲಿಮೆಂಟ್ ಅಂದ್ರೆ ಅಪರೂಪವಾಗಿ ಭೂಗರ್ಭದಲ್ಲಿ ಸಿಗುವಂತಹ ಬೆಲೆಬಾಳುವ ಉತ್ಪನ್ನ ಆಗಿದ್ದು, ಉನ್ನತ ತಂತ್ರಜ್ಞಾನ ಸಾಧನಗಳು ಹಾಗೂ ಮಿಲಿಟರಿ ಉಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ಇದರ ಮೌಲ್ಯ ಚಿನ್ನ ಅಥವಾ ವಜ್ರದ ಮಟ್ಟದಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕಾರಣದಿಂದಲೇ ಶೋಧನೆಯ ಎಲ್ಲಾ ಮಾಹಿತಿಗಳನ್ನು ಹೆಚ್ಚಿನ ಭದ್ರತೆಯೊಂದಿಗೆ, ಬಹಿರಂಗವಾಗದಂತೆ ಇರಿಸಲಾಗಿದೆ.
ಪರಿಸರ ಪ್ರೇಮಿಗಳು ಆತಂಕದಲ್ಲಿ :
ಗೋಕರ್ಣ-ಶರಾವತಿ ಕಡಲತೀರ ಪ್ರದೇಶವು ಕೇವಲ ಪ್ರವಾಸೋದ್ಯಮದ ಕೇಂದ್ರವಷ್ಟೇ ಅಲ್ಲದೇ, ಪಶ್ಚಿಮ ಘಟ್ಟದ ಪ್ರಜ್ಞಾಪೂರ್ವಕವಾದ ಭಾಗವಾಗಿದ್ದು, ಅಪಾರ ಜೀವ ವೈವಿಧ್ಯತೆಯ ನೆಲೆಯಾಗಿಯೂ ಗುರುತಿಸಿಕೊಂಡಿದೆ. “ಈ ಪ್ರದೇಶ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದ ಭಾಗವಾಗಿದೆ. ಇಲ್ಲಿ ಯಾವುದೇ ಗಣಿಗಾರಿಕೆ ಪ್ರಕ್ರಿಯೆ ಆರಂಭವಾದರೆ, ಇದು ನೈಸರ್ಗಿಕ ಸ್ಥಿತಿಗತಿಯನ್ನೇ ಬದಲಾಯಿಸಬಹುದು” ಎಂದು ಕರಾವಳಿಯ ವಿಜ್ಞಾನಿ ಪ್ರಕಾಶ ಮೇಸ್ತ ಎಚ್ಚರಿಸಿದ್ದಾರೆ.
ಶೋಧನೆ ಹೇಗೆ ನಡೆಯುತ್ತಿದೆ?
ಪರಮಾಣು ಖನಿಜಗಳ ಅನ್ವೇಷಣಾ ನಿರ್ದೇಶನಾಲಯದ ಶೋಧನೆಯು ನಾಲ್ಕು ಹಂತಗಳಲ್ಲಿ ನಡೆಯುತ್ತದೆ. ಜಿ1, ಜಿ2, ಜಿ3 ಮತ್ತು ಜಿ4. ಈಗ ಗೋಕರ್ಣದಿಂದ ಶರವಾತಿವರೆಗೆ ನಡೆಯುತ್ತಿರುವ ಶೋಧನೆಯು ಜಿ2 ಹಂತದಲ್ಲಿದ್ದು, ಬೋರ್‌ಹೋಲ್ ಮೂಲಕ ಖನಿಜಗಳ ಪ್ರಮಾಣ ಮತ್ತು ಗುಣಮಟ್ಟ ನಿರ್ಧಾರವಾಗಲಿದೆ. ಇದರ ಬಳಿಕ ಗಣಿಗಾರಿಕೆ ಮಾಡಬಹುದೆಂದು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ರಾಜ್ಯ ಮಟ್ಟದ ಗಣಿಗಾರಿಕೆ ಯೋಜನೆಗಳು:
ಕರ್ನಾಟಕ ಸರ್ಕಾರ ಈಗಾಗಲೇ AMD ನಿಂದ ಪ್ರಸ್ತಾಪಿತ 17 ಖನಿಜ ಸಮೃದ್ಧ ಪ್ರದೇಶಗಳಲ್ಲಿ ವಿವಿಧ ಹಂತದ ಅಧ್ಯಯನಕ್ಕೆ ಅನುಮತಿ ನೀಡಿದ್ದು, ಉತ್ತರ ಕನ್ನಡ ಜಿಲ್ಲೆಯ ಈ ಪ್ರದೇಶವೂ ಅದರ ಭಾಗವಾಗಿದೆ. ಆದರೆ, ಈ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳುವುದಾದರೆ, ಪರಿಸರ ಪ್ರಭಾವ ಅಧ್ಯಯನ ನಿರ್ಬಂಧಗಳು ಅನಿವಾರ್ಯವಾಗಿವೆ.
ಪ್ರಕೃತಿ ಮಡಿಲಿನಲ್ಲಿ ಮೌನವಾಗಿ ನಡೆಯುತ್ತಿರುವ ಈ ಶೋಧನೆ ಪ್ರವಾಸೋದ್ಯಮ, ಪರಿಸರ ಹಾಗೂ ಭದ್ರತಾ ದೃಷ್ಟಿಯಿಂದ ಬಹುಪಾಲು ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ. ಇದರ ಬಗ್ಗೆ ಸಾರ್ವಜನಿಕ ಚರ್ಚೆ ಮತ್ತು ಸ್ಪಷ್ಟತೆ ಇರುವುದು, ಮತ್ತಷ್ಟು ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಭವಿಷ್ಯದ ಪರಿಸರ ಹಾಗೂ ಅಭಿವೃದ್ಧಿಯ ನಡುವಣ ಸಮತೋಲನಕ್ಕಾಗಿ ಅನಿವಾರ್ಯ.