ಧರ್ಮಸ್ಥಳ: ಧರ್ಮಸ್ಥಳದ 1995ರಿಂದ 2004ರ ವರೆಗಿನ ಪ್ರಕರಣಗಳ ತನಿಖೆ ಕೋರಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು (ಪಿಐಎಲ್) ಕಳೆದ ಮೇ 5ರಂದೇ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು ಎಂಬ ವಿಚಾರ ಬಯಲಾದ ಬಳಿಕ ಬುರುಡೆ ಗ್ಯಾಂಗಿನ ಷಡ್ಯಂತ್ರಕ್ಕೆ ಇನ್ನಷ್ಟು ಸಾಕ್ಷಿ ಸಿಕ್ಕಂತಾಗಿದೆ.
ಪಿಐಎಲ್ ವಜಾಗೊಂಡಿರುವ ವಿಷಯವನ್ನು ಮರೆಮಾಚಿ ಚಿನ್ನಯ್ಯನನ್ನು ಮುಂದಿಟ್ಟುಕೊಂಡು ಬುರುಡೆ ಗ್ಯಾಂಗ್ ಸರ್ಕಾರಕ್ಕೆ ತನಿಖೆ ಬಗ್ಗೆ ಮನವಿ ಮಾಡಿತ್ತು ಎಂಬುದು ಈಗ ಬಹಿರಂಗಗೊಂಡಿದೆ. ಸರ್ಕಾರಕ್ಕೆ ಪಿಐಎಲ್ ವಿಚಾರ ಗೊತ್ತಿದ್ದೂ ತನಿಖೆಗೆ ಎಸ್ಐಟಿ ರಚಿಸಿದೆಯೇ ಎಂಬ ಅನುಮಾನ ಈಗ ಮೂಡುವಂತಾಗಿದೆ. ಒಂದು ವೇಳೆ ಪಿಐಎಲ್ ವಿಚಾರ ಗೊತ್ತಿರದಿದ್ದರೆ ಧರ್ಮಸ್ಥಳ ವಿಚಾರವಾಗಿ ಸರ್ಕಾರವೂ ಸಮಗ್ರ ಮಾಹಿತಿ ಹೊಂದಿರಲಿಲ್ಲ ಎಂದಾಗುತ್ತದೆ. ಇದು ಸರ್ಕಾರದ ಬೇಜವಾಬ್ದಾರಿ ನಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಪ್ರಕರಣದಲ್ಲಿ ಸರ್ಕಾರದ ನಡೆಯ ಬಗ್ಗೆಯೂ ಜನರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ತನಿಖೆಗೆ ಕೋರಿ ಸಲ್ಲಿಸಿದ್ದ PIL ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ಇಂತಹ ಪಿಐಎಲ್ ದಾಖಲಿಸಿರುವುದೇ ವ್ಯರ್ಥ ಎಂದು ಅಭಿಪ್ರಾಯಪಟ್ಟಿತ್ತು. ಇದು ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಅಲ್ಲ, ಬದಲಾಗಿ ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಷನ್, ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್ ಎಂದು ಛೀಮಾರಿ ಹಾಕಿತ್ತು. ನ್ಯಾ. ಬಿ.ವಿ. ನಾಗರತ್ನ ಮತ್ತು ನ್ಯಾ. ಸತೀಶ್ ಚಂದ್ರ ಶರ್ಮರಿದ್ದ ಪೀಠ, ವಕೀಲ ಕೆ.ವಿ.ಧನಂಜಯ ಸಲ್ಲಿಸಿದ್ದ PIL ವಜಾಗೊಳಿಸಿತ್ತು.
ಏನಿದು ಪ್ರಕರಣ?
ಕಳೆದ ಏಪ್ರಿಲ್ 30ರಂದು ಧರ್ಮಸ್ಥಳ ಪ್ರಕರಣದ ಕುರಿತು ಎಸ್ಐಟಿ ರಚನೆ ಮಾಡುವಂತೆ ಒತ್ತಾಯಿಸಿ ಬುರುಡೆ ಗ್ಯಾಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ ಮೇ 5ರಂದೇ ಸುಪ್ರೀಂ ಕೋರ್ಟ್ ಬುರುಡೆ ಗ್ಯಾಂಗ್ಗೆ ಛೀಮಾರಿ ಹಾಕಿ ಅರ್ಜಿ ವಜಾಗೊಳಿಸಿತ್ತು.
ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ, ವೈಯಕ್ತಿಕ ಹಿತಾಸಕ್ತಿ ಕಾಣಿಸುತ್ತಿದೆ. ಇದು ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್ ಎಂದು ಬುರುಡೆ ಗ್ಯಾಂಗ್ಗೆ ಛೀಮಾರಿ ಹಾಕಿತ್ತು. ದಶಕಗಳು ಕಳೆದ ಬಳಿಕ ತಡವಾಗಿ ಯಾಕೆ ಈ ಅರ್ಜಿ ಸಲ್ಲಿಸಿದ್ದೀರಿ ಎಂದು ಗ್ಯಾಂಗನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಸಾರಾಸಗಟಾಗಿ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಈ ವಿಚಾರವನ್ನು ಮುಚ್ಚಿಟ್ಟು ಬುರುಡೆ ಗ್ಯಾಂಗ್ ಬೆಳ್ತಂಗಡಿ ನ್ಯಾಯಾಲಯದಲ್ಲಿ ಶವ ಅಗೆಯಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿತ್ತು ಮತ್ತು ಚಿನ್ನಯ್ಯನ ಹೇಳಿಕೆಯನ್ನು ದಾಖಲು ಮಾಡಿಸಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ ದಕ್ಷಿಣ ಕನ್ನಡ ಪೊಲೀಸರು ಚಿನ್ನಯ್ಯ ಮಂಪರು ಪರೀಕ್ಷೆ ನಡೆಸಲು ಅರ್ಜಿ ಹಾಕಿದ್ದರು. ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಸರ್ಕಾರ ದಿಡೀರ್ ಎಂಬಂತೆ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಪ್ರಕಟಿಸಿತ್ತು.
ಎಸ್ಐಟಿಗೆ ಇನ್ನೊಂದು ದೂರು
ಬುರುಡೆ ಪ್ರಕರಣಕ್ಕೆ ಸಾಕ್ಷಿಗಳೆಂದು ಬರುವವರನ್ನು ಆರೋಪಿಗಳೆಂದು ಪರಿಗಣಿಸಿ ತನಿಖೆ ಮಾಡುವಂತೆ ಧರ್ಮಸ್ಥಳ ಕ್ಷೇತ್ರದ ಭಕ್ತ ಶಶಿರಾಜ್ ಶೆಟ್ಟಿ ಎಸ್ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಚಿನ್ನಯ್ಯ ತಾನು ಹೇಳಿದ್ದೆಲ್ಲ ಸುಳ್ಳು ಎಂದು ಒಪ್ಪಿಕೊಂಡಿದ್ದಾನೆ. ಈ ನಡುವೆ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರಕ್ಕೆ ಸಾಕ್ಷಿಗಳಾಗಿ ಅನೇಕರು ಬರುತ್ತಿದ್ದಾರೆ. 40 ವರ್ಷಗಳ ಹಿಂದೆಯೇ ಈ ರೀತಿ ಬೇರೆ ಬೇರೆ ಷಡ್ಯಂತ್ರ ಮಾಡಲಾಗಿತ್ತು. ಕಾನೂನಿನಡಿ ನ್ಯಾಯ ಪಡೆಯದೆ ರಸ್ತೆ ಬದಿ ಹೋರಾಟ ಮಾಡಿ ನಿಂದಿಸುವ ಕೆಲಸ ಮಾಡಲಾಗುತ್ತಿದೆ. ಸಾಕ್ಷಿ ಎಂದು ಹೇಳಿಕೊಂಡು ಬರುವವರು ಆಮಿಷಕ್ಕೆ ಒಳಗಾಗಿ ಸುಳ್ಳು ಹೇಳುವ ಸಾಧ್ಯತೆ ಇರುವುದರಿಂದ ಅವರನ್ನೂ ವಿಚಾರಣೆ ಮಾಡಿ ಎಂದು ದೂರಲ್ಲಿ ಆಗ್ರಹಿಸಲಾಗಿದೆ.
ಗೊತ್ತಿಲ್ಲ ಎಂದ ಪರಮೇಶ್ವರ್
ಬುರುಡೆ ಗ್ಯಾಂಗ್ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ವಿಚಾರದ ಬಗ್ಗೆ ಉತ್ತರ ನೀಡಲು ಗೃಹ ಸಚಿವ ಪರಮೇಶ್ವರ್ ನಿರಾಕರಿಸಿದ್ದಾರೆ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ. ತಿಳಿದುಕೊಂಡು ಮಾತನಾಡದೆ ಹೋದರೆ ಹೋದರೆ ಸಚಿವರಿಗೆ ಏನೂ ಗೊತ್ತಿಲ್ಲ ಎನ್ನುತ್ತೀರಿ. ತಿಳಿದುಕೊಂಡು ಅಮೇಲೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಈ ಪ್ರಶ್ನೆ ಕೇಳಿದರೆ ಏನು ಪ್ರತಿಕ್ರಿಯೆ ನೀಡದೆ ಕಾರುಹತ್ತಿದ್ದಾರೆ.
ಮತ್ತೊಂದು ಅಸ್ಥಿಪಂಜರದ ಗುರುತು ಪತ್ತೆ
ಧರ್ಮಸ್ಥಳದಲ್ಲಿ ಸಿಕ್ಕ ಮತ್ತೊಂದು ಅಸ್ಥಿಪಂಜರದ ಗುರುತು ಪತ್ತೆಯಾಗಿದೆ. ಬಂಗ್ಲೆಗುಡ್ಡೆಯಲ್ಲಿ ನೆಲದ ಮೇಲೆಯೇ ಪತ್ತೆಯಾದ ಅಸ್ಥಿಪಂಜರದ ಬಳಿ ಡ್ರೈವಿಂಗ್ ಲೈಸೆನ್ಸ್ ಸಿಕ್ಕಿತ್ತು. ಈ ಡ್ರೈವಿಂಗ್ ಲೈಸೆನ್ಸ್ನಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಆದಿಶೇಷ ನಾರಾಯಣ ಎಂದು ಹೆಸರು ಇತ್ತು. ಡಿಎಲ್ ಸಿಕ್ಕಿದ ಹಿನ್ನೆಲೆಯಲ್ಲಿ ಆದಿಶೇಷ ನಾರಾಯಣ ಕುಟುಂಬಸ್ಥರಿಗೆ ವಿಶೇಷ ತನಿಖಾ ತಂಡ ವಿಚಾರಣೆಗೆ ಬರುವಂತೆ ಬುಲಾವ್ ನೀಡಿತ್ತು.
ಆದಿಶೇಷ ನಾರಾಯಣ 2013 ಅಕ್ಟೋಬರ್ 2ರಿಂದ ನಾಪತ್ತೆಯಾಗಿದ್ದರು. ಬಾರ್ನಲ್ಲಿ ಕ್ಯಾಶಿಯರ್ ಆಗಿದ್ದ ಯುವಕ ಏಕಾಏಕಿ ನಾಪತ್ತೆಯಾಗಿದ್ದರು. ನಾಪತ್ತೆ ಸಂಬಂಧ ಕುಟುಂಬಸ್ಥರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಕುಟುಂಬಸ್ಥರು ಗುರುವಾರ ಆಗಮಿಸಿ ಹೇಳಿಕೆ ನೀಡಿದ್ದಾರೆ. ವಿಚಾರಣೆಯ ನಂತರ ಡಿಎನ್ಎ ಟೆಸ್ಟ್ ನಡೆಸಲು ಮತ್ತೊಮ್ಮೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ನಾಪತ್ತೆಯಾದ ಬಳಿಕ ನಾವು ಆತನನ್ನು ಹುಡುಕಲಿಲ್ಲ. ಮಾನಸಿಕವಾಗಿ ಚೆನ್ನಾಗಿದ್ದ ಎಂದು ಆದಿಶೇಷ ನಾರಾಯಣನ ಕುಟುಂಬಸ್ಥರು ತಿಳಿಸಿದ್ದಾರೆ.