ವಾಷಿಂಗ್ಟನ್ : ಆಡಳಿತಾರೂಢ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷ ಮತ್ತು ವಿರೋಧ ಪಕ್ಷವಾದ ಡೆಮಾಕ್ರೆಟಿಕ್ ನಡುವಿನ ಹಗ್ಗಜಗ್ಗಾಟ ತಾರಕಕ್ಕೇರಿದ ಪರಿಣಾಮ ಸರ್ಕಾರ ಶಟ್ಡೌನ್ ಆಗಿದೆ. ಈ ಹಿನ್ನೆಲೆ 7.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ವೇತನರಹಿತ ಕಡ್ಡಾಯ ರಜೆ ಘೋಷಿಸಲಾಗಿದೆ.
ರಿಪಬ್ಲಿಕನ್ ಪಕ್ಷವು ಮಂಡಿಸಿದ ಆರೋಗ್ಯ ಸೇವಾ ಅನುದಾನ ಮಸೂದೆಯನ್ನು ಡೆಮಾಕ್ರೆಟಿಕ್ ಸದಸ್ಯರು ಸೆನೆಟ್ನಲ್ಲಿ ವಿರೋಧಿಸಿದ್ದು, ಮಧ್ಯಂತರ ಅನುದಾನದ ಮಸೂದೆಗೆ ಬಹುಮತ ಸಿಗದೇ ಬಿಲ್ ಪಾಸ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಶಟ್ಡೌನ್ ಆಗಿದ್ದು 7.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಭವಿಷ್ಯ ಅತಂತ್ರವಾಗಿದೆ.
ಅಫೋರ್ಡಬಲ್ ಕೇರ್ ಆಕ್ಟ್ ಅಂದರೆ ಒಬಾಮಾಕೇರ್ ಅಡಿಯಲ್ಲಿ ಲಕ್ಷಾಂತರ ಜನರಿಗೆ ನೀಡಲಾಗುತ್ತಿರುವ ಹೆಲ್ತ್ ಇನ್ಸೂರೆನ್ಸ್ ಸಬ್ಸಿಡಿಗಳನ್ನು ಮುಂದುವರಿಸಬೇಕು ಎನ್ನುವುದು ಡೆಮಾಕ್ರೆಟಿಕ್ಗಳ ಪ್ರಮುಖ ಬೇಡಿಕೆಯಾಗಿದೆ. ಇದಕ್ಕೆ ರಿಪಬ್ಲಿಕನ್ನರು ಒಪ್ಪದ ಕಾರಣ ಸೆನೆಟ್ನಲ್ಲಿ 55-45 ಮತಗಳ ಅಂತರದಿಂದ ಬಿಲ್ ಪಾಸ್ ಆಗಿಲ್ಲ. ಇದರ ಪರಿಣಾಮವಾಗಿ ಆಡಳಿತ ಕಾರ್ಯನಿರ್ವಹಣೆಗೆ ಸರ್ಕಾರದ ಬಳಿ ಹಣವಿಲ್ಲದೇ ಅ.1ರ ಮಧ್ಯರಾತ್ರಿ 12:01ಕ್ಕೆ ಅಧಿಕೃತವಾಗಿ ಶಟ್ಡೌನ್ ಘೋಷಿಸಲಾಗಿದೆ.
ಶಟ್ಡೌನ್ ಪರಿಣಾಮಗಳು:
* ದೇಶದ ಸುರಕ್ಷತೆ ಸೇರಿ ಕೆಲ ಅಗತ್ಯ ಸೇವೆಗಳು ಮುಂದುವರಿಯಲಿದ್ದು ಕಾನೂನಿನ ಪ್ರಕಾರ, ಅಗತ್ಯ ಸೇವೆಗಳ ನೌಕರರು ಕೆಲಸ ಮಾಡಲೇಬೇಕು. ಆದರೆ ಅವರಿಗೆ ಶಟ್ಡೌನ್ ಮುಗಿಯುವವರೆಗೂ ವೇತನ ಸಿಗುವುದಿಲ್ಲ. ಸೇನಾ ಸಿಬ್ಬಂದಿ, ಗಡಿ ಭದ್ರತಾ ಪಡೆ, ಮತ್ತು ಕಾನೂನು ಜಾರಿ ಸಂಸ್ಥೆಗಳು ಕರ್ತವ್ಯದಲ್ಲಿರುತ್ತವೆ.
* ಆಸ್ಪತ್ರೆಗಳಲ್ಲಿನ ವೈದ್ಯಕೀಯ ಆರೈಕೆ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಮುಂದುವರಿಯುತ್ತದೆ. ಸಾಮಾಜಿಕ ಭದ್ರತೆ ಮತ್ತು ಮೆಡಿಕೇರ್ ಚೆಕ್ಗಳನ್ನು ಫಲಾನುಭವಿಗಳಿಗೆ ಕಳುಹಿಸಲಾಗುತ್ತದೆ. ನಾಸಾದ ಬಾಹ್ಯಾಕಾಶ ಯೋಜನೆಗಳು ಮತ್ತು ಅಧ್ಯಕ್ಷ ಟ್ರಂಪ್ರ ವಲಸೆ ನೀತಿಗೆ ಸಂಬಂಧಿಸಿದ ಕಾರ್ಯಗಳು ಮುಂದುವರಿಯಲಿವೆ.
* ಅಗತ್ಯವಲ್ಲದ ಎಂದು ಪರಿಗಣಿಸಲಾದ ಸುಮಾರು 7.50 ಲಕ್ಷ ನೌಕರರನ್ನು ವೇತನರಹಿತ ಕಡ್ಡಾಯ ರಜೆ ಮೇಲೆ ಕಳಿಸಲಾಗುತ್ತದೆ. ಶಿಕ್ಷಣ ಇಲಾಖೆಯ ಶೇ. 90ರಷ್ಟು ಸಿಬ್ಬಂದಿ ರಜೆಯಲ್ಲಿರುತ್ತಾರೆ. ರಾಷ್ಟ್ರೀಯ ಉದ್ಯಾನವನಗಳು, ವಸ್ತುಸಂಗ್ರಹಾಲಯಗಳು ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ.
* ಸಣ್ಣ ಉದ್ಯಮಗಳಿಗೆ ನೀಡುವ ಸಾಲ ಸ್ಥಗಿತಗೊಳ್ಳಲಿದೆ. ಆಹಾರ ನೆರವು ಕಾರ್ಯಕ್ರಮಗಳು, ವಿದ್ಯಾರ್ಥಿ ವೇತನ ವಿತರಣೆ, ಮತ್ತು ಆಹಾರ ತಪಾಸಣಾ ಕಾರ್ಯಗಳಿಗೆ ಅಡ್ಡಿಯಾಗಲಿದೆ. ದೇಶದ ಆರ್ಥಿಕತೆಯ ಪ್ರಮುಖ ಸೂಚಕವಾದ ಕಾರ್ಮಿಕ ಇಲಾಖೆಯ ಮಾಸಿಕ ನಿರುದ್ಯೋಗ ವರದಿ ಕೂಡ ಪ್ರಕಟವಾಗುವುದಿಲ್ಲ.