ಚೆನ್ನೈ : ಕಳೆದ 45 ದಿನಗಳಿಂದ ಚೆನ್ನೈ ಕಸ್ಟಮ್ಸ್ ಅಧಿಕಾರಿಗಳಿಂದ ನಿರಂತರ ಕಿರುಕುಳ ಮತ್ತು ಲಂಚದ ಬೇಡಿಕೆಗಳನ್ನು ಆರೋಪಿಸಿ ತಮಿಳುನಾಡು ಮೂಲದ ಲಾಜಿಸ್ಟಿಕ್ಸ್ ಸಂಸ್ಥೆ ವಿನ್ಟ್ರ್ಯಾಕ್ ಇಂಕ್, ಅಕ್ಟೋಬರ್ 1 ರಿಂದ ಭಾರತದಲ್ಲಿ ತನ್ನ ಆಮದು-ರಫ್ತು ವ್ಯವಹಾರವನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿದೆ.
ಈ ವರ್ಷದ ಆರಂಭದಲ್ಲಿ ಲಂಚ ನೀಡಲು ಒತ್ತಾಯಿಸಿದ ಸಂಗತಿಯನ್ನು ಬಹಿರಂಗಪಡಿಸಿದ ನಂತರ ತಮ್ಮ ಕಾರ್ಯಾಚರಣೆಗಳು ‘ಸ್ತಬ್ಧಗೊಂಡಿವೆ ಮತ್ತು ನಾಶವಾಗಿವೆ’ ಎಂದು ಕಂಪನಿಯು ‘ಎಕ್ಸ್’ ನಲ್ಲಿನ ಪೋಸ್ಟ್ ಮಾಡಿದೆ. ಸ್ಪೆಷಲ್ ಇಂಟೆಲಿಜೆನ್ಸ್ ಆಂಡ್ ಇನ್ವೆಸ್ಟಿಗೇಷನ್ ಬ್ರಾಂಚ್ ಅಧಿಕಾರಿಗಳು ತಮ್ಮ ಪತ್ನಿಯ ಸಂಸ್ಥೆಯನ್ನು $6,993 ಮೌಲ್ಯದ ಸಾಗಣೆಗೆ 2.1 ಲಕ್ಷ ರೂ.ಗೂ ಹೆಚ್ಚು ಲಂಚ ನೀಡಲು ಒತ್ತಾಯಿಸಲಾಗಿದೆ ಎಂದು ವಿನ್ಟ್ರ್ಯಾಕ್ನ ಸಂಸ್ಥಾಪಕ ಪ್ರವೀಣ್ ಗಣೇಶನ್ ಆರೋಪಿಸಿದ್ದಾರೆ. ಅಲ್ಲದೆ, ಅಧಿಕಾರಿಗಳು ಸಂಧಾನದ ಸಮಯದಲ್ಲಿ ‘ಶೇಕಡ 10 ರಷ್ಟು ರಿಯಾಯಿತಿ ನೀಡಿದ್ದರು’ ಎಂದೂ ಅವರು ದೂರಿದ್ದಾರೆ.
ಈ ಆರೋಪವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಆರೋಪಗಳನ್ನು ‘ಇದು ನಿಜಕ್ಕೂ ಆತಂಕಕಾರಿ. ಭ್ರಷ್ಟಾಚಾರವು ಇನ್ನೂ ವ್ಯಾಪಕವಾಗಿದೆ. ಹೆಚ್ಚಿನ ಸಂಸ್ಥೆಗಳು ಇದನ್ನು ವ್ಯಾಪಾರ ಮಾಡುವ ಬೆಲೆಯ ಒಂದು ಭಾಗವೆಂದು ಪರಿಗಣಿಸಿ ಸುಮ್ಮನೆ ಪಾವತಿಸುತ್ತವೆ’ ಎಂದು ತಿಳಿಸಿದರು. ಅರಿನ್ ಕ್ಯಾಪಿಟಲ್ನ ಅಧ್ಯಕ್ಷ, ಇನ್ಫೋಸಿಸ್ನ ಮಾಜಿ ಸಿಎಫ್ಒ ಆದ ಮೋಹನ್ದಾಸ್ ಪೈ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ, ‘ಬಂದರುಗಳಲ್ಲಿನ ವ್ಯವಸ್ಥಿತ ಭ್ರಷ್ಟಾಚಾರವನ್ನು ಪರಿಶೀಲಿಸದೆ ಬಿಡಲಾಗಿದೆ’ ಎಂದು ಹೇಳಿದರು.
ಆರೋಪಗಳನ್ನು ನಿರಾಕರಿಸಿದ ಕಸ್ಟಮ್ಸ್
ಆದಾಗ್ಯೂ, ಚೆನ್ನೈ ಕಸ್ಟಮ್ಸ್ ಈ ಆರೋಪಗಳನ್ನು ನಿರಾಕರಿಸಿದೆ. ಅನುಸರಣೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿನ್ಟ್ರ್ಯಾಕ್ಗೆ ದಂಡ ವಿಧಿಸಲಾಗಿದೆ ಎಂದು ಹೇಳಿದೆ. ಈ ಬಗ್ಗೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ ಇಲಾಖೆ, ‘ಸಂಸ್ಥೆಯು ಸರಕುಗಳ ತಪ್ಪು ವರ್ಗೀಕರಣ, ಯುಎಸ್ಬಿ ಚಾರ್ಜಿಂಗ್ ಕೇಬಲ್ಗಳನ್ನು ಘೋಷಿಸದಿರುವುದು ಮತ್ತು ಬ್ಯಾಟರಿ ತ್ಯಾಜ್ಯ ನಿರ್ವಹಣಾ ನಿಯಮಗಳು, 2022 ರ ಅಡಿಯಲ್ಲಿ ವಿಸ್ತೃತ ಉತ್ಪಾದಕ ಜವಾಬ್ದಾರಿ ಪ್ರಮಾಣೀಕರಣವನ್ನು ಒದಗಿಸಲು ವಿಫಲವಾದ ಕಾರಣ ದಂಡ ವಿಧಿಸಲಾಗಿದೆ’ ಎಂದು ತಿಳಿಸಿದೆ.
ವಿಚಾರಣೆ ವೇಳೆ, ‘ವಿಳಂಬಕ್ಕೆ ಅವಕಾಶ ನೀಡಲಾಗಿದೆ. ದಂಡವನ್ನು ಕಡಿಮೆ ಮಾಡಲು ಬಾಂಡ್ ಅನುಮತಿಗಳನ್ನು ನೀಡಲಾಗಿದೆ. ಆದರೆ ಯಾವುದೇ ಲಂಚವನ್ನು ಕೇಳಲಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಉಲ್ಲಂಘನೆಗಳು ಕಂಡುಬಂದಾಗಲೆಲ್ಲಾ, ಆಮದುದಾರರು ಕಸ್ಟಮ್ಸ್ ವಿರುದ್ಧ ನಿಯಮಿತವಾಗಿ ಸುಳ್ಳು ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾರೆ. ಆರೋಪಗಳನ್ನು ತಳ್ಳಿ ಹಾಕಿದ ಬಳಿಕ ಅಂತಹ ಆರೋಪಗಳನ್ನು ಅಳಿಸುತ್ತಾರೆ’ ಎಂದು ಹೇಳಿದ್ದಾರೆ.