ಹಾಸನ : ಜಾತಿಗಣತಿಗೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಪರಿಣಾಮ ಮುಖ, ಕೈ-ಕಾಲು ಸೇರಿದಂತೆ ದೇಹದ ಹಲವು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೇಲೂರಿನ ಜೈಭೀಮ್ ನಗರದಲ್ಲಿ ನಡೆದಿದೆ. ಈ ವೇಳೆ ಶಿಕ್ಷಕಿಯನ್ನು ಕಾಪಾಡಲು ಬಂದ ಪತಿ ಸೇರಿದಂತೆ 7 ಮಂದಿಯನ್ನು ನಾಯಿಗಳು ಕಚ್ಚಿವೆ.
ಬೀದಿನಾಯಿಗಳ ದಾಳಿಯಿಂದ ಗಾಯಗೊಂಡಿರುವ ಶಿಕ್ಷಕಿಯನ್ನು ಪಟ್ಟಣದ ಜಿಹೆಚ್ಪಿಎಸ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕಮ್ಮ ಎಂದು ಗುರುತಿಸಲಾಗಿದೆ. ನಾಯಿಗಳು ದಾಳಿ ಮಾಡಿದ ವೇಳೆ ಅಲ್ಲೇ ಇದ್ದ ಪತಿ ಶಿವಕುಮಾರ್ ಹಾಗೂ ಸ್ಥಳಿಯ ಯುವಕರಾದ ಧರ್ಮ, ಪೃಥ್ವಿ, ಸಚಿನ್ ಸೇರಿದಂತೆ ಎಳು ಜನ ಶಿಕ್ಷಕಿಯನ್ನು ಕಾಪಾಡಲು ಮುಂದಾಗಿದ್ದಾರೆ. ಆದರೆ ಕಾಪಾಡಲು ಮುಂದಾದ 7 ಮಂದಿಗೂ ನಾಯಿಗಳು ಕಚ್ಚಿ ಗಾಯಮಾಡಿದೆ. ಅಲ್ಲದೇ ಅಲ್ಲೇ ಆಟವಾಡುತ್ತಿದ್ದ 5 ವರ್ಷದ ಬಾಲಕನ ಮೇಲೂ ನಾಯಿಗಳು ದಾಳಿ ನಡೆಸಿವೆ.
ಶಿಕ್ಷಕಿಗೆ ನೀಡಿದ್ದ ಸಮೀಕ್ಷೆ ಮುಗಿಸಲು ಇಂದು ಕಡೆಯ ದಿನವಾಗಿತ್ತು. ಬಾಕಿಯಿದ್ದ ಮೂರು ಮನೆ ಸಮೀಕ್ಷೆ ನಡೆಸಲು ಅವರು ಪತಿಯೊಂದಿಗೆ ತೆರಳಿದ್ದರು. ಈ ಸಂದರ್ಭ ನಾಯಿಗಳು ದಾಳಿ ನಡೆಸಿವೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಶಿಕ್ಷಕಿ ಹಾಗೂ ಉಳಿದ ಗಾಯಾಳುಗಳಿಗೆ ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದರಲ್ಲಿ ಮೂರು ಜನರಿಗೆ ಹೆಚ್ಚು ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.