ಬ್ಯಾಂಕುಗಳು ಮತ್ತು ನಿಯಂತ್ರಣ ಸಂಸ್ಥೆಗಳ ಬಳಿ ರೂ.1.84 ಲಕ್ಷ ಕೋಟಿ ಮೌಲ್ಯದ ಹಣಕಾಸು ಆಸ್ತಿಗಳು ಕ್ಲೇಮ್ ಆಗದೆ ಉಳಿದಿದ್ದು, ಇದೆಲ್ಲವೂ ನ್ಯಾಯ ಸಮ್ಮತ ಮಾಲೀಕರಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸೂಚನೆ ನೀಡಿದ್ದಾರೆ.
“ನಿಮ್ಮ ಹಣ ನಿಮ್ಮ ಅಧಿಕಾರ” (ಆಪ್ ಕೀ ಪೂಂಜಿ, ಆಪ್ ಕಾ ಅಧಿಕಾರ್) ಎಂಬ ಮೂರು ತಿಂಗಳ ಅಭಿಯಾನಕ್ಕೆ ಗುಜರಾತ್ ನ ಗಾಂಧಿನಗರದಲ್ಲಿ ಚಾಲನೆ ನೀಡಿ, ಗುಜರಾತ್ ಹಣಕಾಸು ಮಂತ್ರಿ, ಬ್ಯಾಂಕ್ ಮತ್ತು ಆರ್ಥಿಕ ಇಲಾಖೆಗಳ ಹಿರಿಯ ಅಧಿಕಾರಿಗಳ ಮುಂದೆ ಮಾತನಾಡಿದ ಅವರು ಬ್ಯಾಂಕ್ ಠೇವಣಿಗಳು, ವಿಮೆ, ಭವಿಷ್ಯ ನಿಧಿ ಮತ್ತು ಷೇರುಗಳ ರೂಪದಲ್ಲಿ ಇಷ್ಟು ದೊಡ್ಡ ಮೊತ್ತ ಕ್ಲೇಮ್ ಆಗದೆ ಬ್ಯಾಂಕುಗಳಲ್ಲಿ, RBI ನಲ್ಲಿ ಮತ್ತು ಇನ್ವೆಸ್ಟರ್ ಎಜುಕೇಶನ್ ಅಂಡ್ ಪ್ರೊಟೆಕ್ಷನ್ ಫಂಡಲ್ಲಿ ಉಳಿದಿದೆ. ರೂ.75000 ಕೋಟಿಗೂ ಮಿಕ್ಕಿದ ಹಣ ಬ್ಯಾಂಕುಗಳಲ್ಲೇ ಉಳಿದುಕೊಂಡಿದೆ. ಉಳಿದ ಹಣ ಇನ್ಸೂರೆನ್ಸ್, ಭವಿಷ್ಯ ನಿಧಿ, ಷೇರುಗಳು ಮತ್ತು ಡಿವಿಡೆಂಡ್ ರೂಪದಲ್ಲಿವೆ.
ಸುರಕ್ಷಿತವಾಗಿರುವ ಈ ಹಣವನ್ನು ಸಂಬಂಧಿಸಿದವರಿಗೆ ತಲುಪಿಸಲು ಅವೇರ್ನೆಸ್, ಆಕ್ಸೆಸ್ ಮತ್ತು ಆಕ್ಷನ್ (Awareness, Access and Action) ಎಂಬ ಮೂರು ‘A’ ಗಳ ಆಧಾರದ ಮೇಲೆ ಕೆಲಸ ಮಾಡಬೇಕು. ಸಂಬಂಧಪಟ್ಟ ಕ್ಲೇಮ್ ದಾರರು ಸರಿಯಾದ ದಾಖಲೆಗಳೊಂದಿಗೆ ಯಾವಾಗ ಬೇಕಾದರೂ ಬಂದು ಹಣ ಪಡೆಯಬಹುದು ಎಂದು ಹೇಳಿದರು. ಈ ಹಣವನ್ನು ಸಂಬಂಧಪಟ್ಟವರಿಗೆ ತಲುಪಿಸಲೆಂದೇ ಭಾರತೀಯ ರಿಸರ್ವ್ ಬ್ಯಾಂಕ್ “Unclaimed Deposits Gateway to Access inforMation – (UDGAM)” ಎಂಬ ಪೋರ್ಟಲ್ ರೂಪಿಸಿದೆ. ಇದರ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.