ಬೆಂಗಳೂರು/ಧಾರವಾಡ : ಕರ್ನಾಟಕದಾದ್ಯಂತ ಈರುಳ್ಳಿ ಬೆಲೆಯಲ್ಲಿ ತೀವ್ರ ಕುಸಿತವು ರೈತರಿಗೆ ಭಾರಿ ನಷ್ಟವನ್ನುಂಟು ಮಾಡಿದೆ. ಆದರೆ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಭಿವೃದ್ಧಿಪಡಿಸಿದ ದಶಕಗಳಷ್ಟು ಹಳೆಯದಾದ ಒಣಗಿಸುವ ತಂತ್ರಜ್ಞಾನವು ಈ ಸಂದರ್ಭದಲ್ಲಿ ಅಗತ್ಯ ಪರಿಹಾರ ನೀಡಬಲ್ಲದು. ಆದರೆ ಈ ತಂತ್ರಜ್ಞಾನವು ತಳಮಟ್ಟವನ್ನು ತಲುಪಬೇಕಷ್ಟೆ.
ಇತ್ತೀಚಿನ ವಾರಗಳಲ್ಲಿ, ಈರುಳ್ಳಿಯ ಸರಾಸರಿ ಮಾರುಕಟ್ಟೆ ಬೆಲೆ ಕ್ವಿಂಟಾಲ್‌ಗೆ 5,000ರೂ. 6,000 ರೂ.ರಿಂದ ಸುಮಾರು 1,700 ರೂ.ಗೆ ಕುಸಿದಿದೆ. ಚಿಲ್ಲರೆ ಬೆಲೆಗಳು ಕೆಜಿಗೆ 8ರೂ. ಮತ್ತು 18 ರೂ. ನಡುವೆ ಇವೆ. ನೆರೆಯ ರಾಷ್ಟ್ರಗಳಿಗೆ ರಫ್ತು ಕಡಿಮೆಯಾಗಿರುವುದು ಮತ್ತು ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಕೇರಳದಂತಹ ಇತರ ಭಾರತೀಯ ರಾಜ್ಯಗಳಲ್ಲಿ ಹೆಚ್ಚಿದ ಸ್ವಾವಲಂಬನೆಯಿಂದಾಗಿ ಈ ತೀವ್ರ ಕುಸಿತ ಉಂಟಾಗಿದೆ.
ಕರ್ನಾಟಕದ ರೈತರು ಸಾಮಾನ್ಯವಾಗಿ ಒಂದು ಎಕರೆಗೆ 30-40 ಕ್ವಿಂಟಾಲ್ ಈರುಳ್ಳಿ ಉತ್ಪಾದಿಸಲು ಸುಮಾರು 50,000 ರೂ. ಖರ್ಚು ಮಾಡುತ್ತಾರೆ. ಬೆಲೆಯ ಈ ಹಠಾತ್ ಇಳಿಕೆಯು ಲಾಭಾಂಶವನ್ನು ಕಡಿತಗೊಳಿಸಿ, ಅವರ ಜೀವನೋಪಾಯಕ್ಕೆ ಅಪಾಯವನ್ನುಂಟು ಮಾಡಿದೆ. ಸಾಮಾನ್ಯವಾಗಿ, ಪ್ರತಿ ರೈತರು ವರ್ಷದ ಈ ಸಮಯದಲ್ಲಿ ಸುಮಾರು 2,000 ಚೀಲಗಳಷ್ಟು ಈರುಳ್ಳಿಯನ್ನು ಇತರ ರಾಜ್ಯಗಳ ಮಾರುಕಟ್ಟೆಗಳಿಗೆ ಕಳುಹಿಸುತ್ತಿದ್ದರು. ಆದರೆ ಬೇಡಿಕೆಯ ಕುಸಿತದಿಂದ ಸಾಗಣೆ ಅರ್ಧದಷ್ಟು ಕಡಿಮೆಯಾಗಿದೆ. ಶೇಖರಣಾ ಸೌಲಭ್ಯಗಳಿಲ್ಲದವರು ಮಾರಾಟವನ್ನು ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ಉತ್ಪನ್ನ ಹಾಳಾಗುವ ಮತ್ತು ವ್ಯರ್ಥವಾಗುವ ಅಪಾಯ ಎದುರಾಗಿದೆ.
ಐಐಎಸ್ಸಿಯ ದಶಕಗಳ ಹಳೆಯ ಪರಿಹಾರ
1990 ರ ದಶಕದ ಆರಂಭದಲ್ಲಿ, ಐಐಎಸ್‌ಸಿ ಯ ಅಪ್ಲಿಕೇಷನ್ ಆಫ್ ಸೈನ್ಸ್ & ಟೆಕ್ನಾಲಜಿ ಫಾರ್ ರೂರಲ್ ಏರಿಯಾಸ್, ತರಕಾರಿ ಮತ್ತು ಹಣ್ಣುಗಳನ್ನು ಒಣಗಿಸಿ, ಪುಡಿ ಮಾಡಿ, ಆರು ತಿಂಗಳಿಂದ ಒಂದು ವರ್ಷದವರೆಗೆ ಶೇಖರಣಾ ಸಾಮರ್ಥ್ಯದೊಂದಿಗೆ ಪ್ಯಾಕೇಜ್ ಮಾಡಲು ಸಹಾಯಕವಾಗುವ ಒಣಗಿಸುವ ಯಂತ್ರವನ್ನು ಆವಿಷ್ಕರಿಸಿತ್ತು. ಇದರ ಉತ್ತರಾಧಿಕಾರಿಯಾದ ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜೀಸ್, ಇದನ್ನು 2013 ರಲ್ಲಿ ನವೀಕರಿಸಿತು. ಈಗ ಈ ತಂತ್ರಜ್ಞಾನವು ಬಯೋಮಾಸ್ ಇಂಧನ ಮತ್ತು ಸೂರ್ಯಾಸ್ತದ ನಂತರವೂ ಕಾರ್ಯನಿರ್ವಹಿಸಬಲ್ಲ ಸೌರ-ಬಯೋಮಾಸ್ ಹೈಬ್ರಿಡ್ ಡ್ರೈಯರ್‌ಗಳನ್ನು ಬಳಸುತ್ತದೆ.
ಈ ತಂತ್ರಜ್ಞಾನವನ್ನು ಎನ್‌ಜಿಒಗಳು ಮತ್ತು ಸ್ವ-ಸಹಾಯ ಗುಂಪುಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಇದು ರೈತರಿಂದ ವ್ಯಾಪಕವಾಗಿ ಅಳವಡಿಕೆಯಾಗಬೇಕಿದೆ. ತಜ್ಞರ ಪ್ರಕಾರ, ಈ ಆವಿಷ್ಕಾರವು ಹೆಚ್ಚುವರಿ ಬೆಳೆಗಳನ್ನು ನಿರ್ವಹಿಸುವ ವಿಧಾನವನ್ನು ಬದಲಾಯಿಸಬಹುದು. ರೈತರು ತಾಜಾ ಉತ್ಪನ್ನವನ್ನು ಮೌಲ್ಯವರ್ಧಿತ ಒಣಗಿದ ಸರಕುಗಳಾಗಿ ಪರಿವರ್ತಿಸಲು ಇದು ಸಹಾಯ ಮಾಡುತ್ತದೆ, ಅದನ್ನು ನಂತರ ಉತ್ತಮ ಬೆಲೆಗೆ ಮಾರಾಟ ಮಾಡಬಹುದು.
ತಂತ್ರಜ್ಞಾನದ ಕುರಿತು ತಜ್ಞರ ಅಭಿಪ್ರಾಯ
“ಇದು ನಮಗೆ ಹೊಸತೇನಲ್ಲ – ಆಹಾರವನ್ನು ಒಣಗಿಸಿ ಸಂಗ್ರಹಿಸುವುದು ಪುರಾತನ ಅಭ್ಯಾಸ. ಆದರೆ ಸೌರಶಕ್ತಿ ಚಾಲಿತ ಹೀಟರ್‌ಗಳು ಮತ್ತು ಯಂತ್ರಗಳಂತಹ ಆಧುನಿಕ ತಂತ್ರಜ್ಞಾನದ ಬಳಕೆಯು ಈ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಿದೆ” ಎಂದು ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನಲ್ಲಿರುವ ಸೆಂಟರ್ ಫಾರ್ ರಿನ್ಯೂವಬಲ್ ಎನರ್ಜಿ ಅಂಡ್ ಸಸ್ಟೈನಬಲ್ ಟೆಕ್ನಾಲಜೀಸ್ ಮುಖ್ಯಸ್ಥರಾದ ಶಾಮ್‌ಸುಂದರ್ ಸುಬ್ಬರಾವ್ ಮಾಹಿತಿ ನೀಡಿದ್ದಾರೆ.
“ಈ ಒಣಗಿಸುವ ತಂತ್ರಜ್ಞಾನವು ಗ್ರಾಮೀಣ ಮಹಿಳೆಯರಿಗೆ ಸಣ್ಣ ಪ್ರಮಾಣದ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮತ್ತು ಒಣಗಿದ ತರಕಾರಿಗಳು ಹಾಗೂ ಪುಡಿಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುವ ಮೂಲಕ ಅವರನ್ನು ಸಬಲೀಕರಣಗೊಳಿಸುತ್ತದೆ” ಎಂದು ಎನ್‌ಜಿಒ ಟೆಕ್ನಾಲಜಿ ಇನ್ಫಾರ್ಮ್ಯಾಟಿಕ್ಸ್ ಡಿಸೈನ್ ಎಂಡೀವರ್ ನ ಅಧ್ಯಕ್ಷರಾದ ಸ್ವಾತಿ ಭೋಗ್ಲೆ ಅವರು ತಿಳಿಸಿದ್ದಾರೆ.
“ರೈತರು ಸೌರ ಅಥವಾ ಹೈಬ್ರಿಡ್ ಡ್ರೈಯರ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ ಏಕೆಂದರೆ ಅವುಗಳಿಗೆ ನಿರಂತರ ಮೇಲ್ವಿಚಾರಣೆ ಅಗತ್ಯವಿಲ್ಲ. ಸೂರ್ಯಾಸ್ತದ ನಂತರವೂ ಕೆಲಸ ಮಾಡಬಲ್ಲವು. ಆದಾಗ್ಯೂ, ಇದು ಯಶಸ್ವಿಯಾಗಲು, ಒಣಗಿದ ಉತ್ಪನ್ನಗಳಿಗೆ ಗ್ರಾಹಕರ ಬೇಡಿಕೆ ಹೆಚ್ಚಬೇಕು ಮತ್ತು ಮಾರುಕಟ್ಟೆಯನ್ನು ಸ್ಥಿರಗೊಳಿಸಬೇಕು” ಎಂದು ಅವರು ಹೇಳಿದರು.
ಐಐಎಸ್ಸಿಯ ಒಣಗಿಸುವ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದರಿಂದ ಕೃಷಿ ಕುಟುಂಬಗಳು ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡಲು, ಆರ್ಥಿಕ ಸ್ಥಿರತೆಯನ್ನು ಪಡೆಯಲು ಮತ್ತು ಹಠಾತ್ ಬೆಲೆ ಕುಸಿತದ ಪರಿಣಾಮಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ರೈತರು ಈರುಳ್ಳಿ ಬೆಲೆ ಕುಸಿತದೊಂದಿಗೆ ಹೋರಾಡುತ್ತಿರುವಾಗಲೂ ಜಾಗೃತಿ ಮತ್ತು ಬೆಂಬಲದ ಕೊರತೆಯಿಂದಾಗಿ ಈ ನೂತನ ಪರಿಹಾರವು ಬಳಕೆಯಾಗದೆ ಉಳಿದಿದೆ.