ಉತ್ತರ ಪ್ರದೇಶ : ಸಾರ್ವಜನಿಕ ಕುಂದುಕೊರತೆಗಳ ಪರಿಹಾರಕ್ಕಾಗಿ ಆಯೋಜಿಸಲಾಗಿರುವ “ಸಮಾಧಾನ್ ದಿವಸ್” ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಮಹಮೂದಾಬಾದ್ ತಾಲ್ಲೂಕಿನ ಲೋಧ್ಸಾ ಗ್ರಾಮದ ನಿವಾಸಿ ಮೆರಾಜ್ ಎಂಬುವವರು, ತಮ್ಮ ಪತ್ನಿ ನಸೀಮುನ್ ಕುರಿತು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಎದುರು ಮಾಡಿದ ವಿಚಿತ್ರ ದೂರಿನ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.
ಸರ್, ನನ್ನ ಹೆಂಡತಿ ರಾತ್ರಿಯಲ್ಲಿ ಹಾವಾಗಿ ಬದಲಾಗುತ್ತಾಳೆ ಮತ್ತು ನನ್ನನ್ನು ಕಚ್ಚಲು ನನ್ನ ಹಿಂದೆ ಓಡುತ್ತಾಳೆ,” ಎಂದು ಗಂಭೀರವಾಗಿ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಹೇಳಿದಾಗ ಸಭೆಯಲ್ಲಿದ್ದವರು ಗಾಬರಿಗೆ ಒಳಗಾದರು. ತಮ್ಮ ಪತ್ನಿ ಹಲವಾರು ಬಾರಿ ದಾಳಿ ನಡೆಸಲು ಯತ್ನಿಸಿದ್ದರೂ, ಅವರು ಪ್ರತಿಬಾರಿಯೂ ಎಚ್ಚರಿಕೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮೆರಾಜ್ ಅವರು ದೂರಿದ್ದಾರೆ. “ನಾನು ನಿದ್ದೆ ಮಾಡುವಾಗ ಯಾವಾಗಲೂ ನನಗೆ ಜೀವ ಭಯವಿದೆ. ನನ್ನ ಹೆಂಡತಿ ನನ್ನನ್ನು ಮಾನಸಿಕವಾಗಿ ಹಿಂಸಿಸುತ್ತಾಳೆ,” ಎಂದು ಅವರು ಲಿಖಿತ ಅರ್ಜಿಯನ್ನೂ ಸಲ್ಲಿಸಿದ್ದಾರೆ.
ಈ ವಿಚಿತ್ರ ದೂರಿನ ಆಧಾರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ತಕ್ಷಣವೇ ತನಿಖೆಗೆ ಆದೇಶ ಹೊರಡಿಸಿದ್ದು, ಈ ಪ್ರಕರಣವನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಸ್ಥಳೀಯ ಪೊಲೀಸರಿಗೆ ದಾಖಲಿಸಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಪೊಲೀಸರು ಈ ಘಟನೆಯನ್ನು “ಮಾನಸಿಕ ಕಿರುಕುಳದ ಸಂಭಾವ್ಯ ಪ್ರಕರಣ”ವೆಂದು ಪರಿಗಣಿಸಿ, ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಬೆನ್ನಲ್ಲೇ, ಮೆರಾಜ್ ಅವರ ದೂರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವು ಯುವಕರು ತಮಾಷೆಯ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. “ನೀನು ಅವಳ ನಾಗಮಣಿಯನ್ನು ಎಲ್ಲೋ ಮರೆಮಾಡಿದ್ದೀಯಾ?”, “ಅವಳು ಶ್ರೀದೇವಿಯಂತಾ? ನಗಿನ್ ಸಿನಿಮಾ ನೆನಪಾಯ್ತು!”, “ನೀನೂ ನಾಗರಹಾವು ಆಗಬೇಕು!” ಎಂಬ ರೀತಿಯ ಹಲವಾರು ಹಾಸ್ಯಾಸ್ಪದ ಕಾಮೆಂಟ್‌ಗಳು ಎಕ್ಸ್ ಖಾತೆಯಲ್ಲಿ ಹರಿದಾಡುತ್ತಿವೆ.
ಈವರೆಗೂ ಮೆರಾಜ್ ಅವರ ದೂರಿನಲ್ಲಿ ತಿಳಿಸಿದಂತೆ ಪತ್ನಿ ಒಮ್ಮೆ ಅವರನ್ನು ಕಚ್ಚಿದ ಘಟನೆ ನಡೆದಿರುವ ಬಗ್ಗೆ ಪ್ರತ್ಯಕ್ಷ ಸಾಕ್ಷ್ಯಗಳು ಅಥವಾ ವೈದ್ಯಕೀಯ ದೃಢೀಕರಣ ಲಭ್ಯವಿಲ್ಲ. ಆದರೆ, ಅವರು ತಮ್ಮ ಆತಂಕವನ್ನು ಅಧಿಕೃತವಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾಪಿಸಿರುವುದರಿಂದ, ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.